ಮಂಗಳೂರು: ಮಂಗಳೂರಿನಲ್ಲಿ ಹಸಗೂಸು ಮಾಋಅಟದ ಜಾಲ ಪತ್ತೆಯಾಗಿದೆ. ಮಕ್ಕಳಿಲ್ಲದವರಿಗೆ ಮಗು ಮಾರಾಟ ಮಾಡುವ ಹೈಟೆಕ್ ದಂಧೆ ಇದಾಗಿದ್ದು, ಮಗು ಮಾರಾಟ ಮಾಡುತ್ತಿದ್ದ ಪಾಪಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಹಸುಗೂಸುವನ್ನು ಮಾರಾಟ ಮಾಡುತ್ತಿದ್ದ ಈ ಹೈಟೆಕ್ ದಂಧೆ ಬಯಲಾಗಿದೆ. ಮೈಸೂರು ಮೂಲದ ಒಡನಾಡಿ ಎಂಬ ಸಂಸ್ಥೆ ಈ ಭಯಾನಕ ಮಾಫಿಯಾದ ಬಗ್ಗೆ ಕಾರ್ಯಾಚರಣೆ ಮಾಡಿದ್ದು, ಮಂಗಳೂರು ಪೊಲೀಸರ ನೆರವಿನಿಂದ ಮಗು ಮಾರಾಟದ ಜಾಲ ಬೆಳಕಿಗೆ ಬಂದಿದೆ. ಸದ್ಯ 5 ತಿಂಗಳ ಹೆಣ್ಣು ಮಗುವನ್ನು ಮಂಗಳೂರು ಪೊಲೀಸರು ರಕ್ಷಣೆ ಮಾಡಿದ್ದು,ಶುಶ್ರೂಕರ ಆರೈಕೆಯಲ್ಲಿದೆ.
Advertisement
Advertisement
ಈ ಹಿಂದೆಯೂ ಹಲವು ಮಕ್ಕಳನ್ನು ಇದೇ ರೀತಿಯಾಗಿ ಮಾರಾಟ ಮಾಡಿರೋದು ಬೆಳಕಿಗೆ ಬಂದಿದೆ. ಅಲ್ಲದೆ ಮಗುವಿಗೆ ರೇಟ್ ಕೂಡಾ ಈ ಗ್ಯಾಂಗ್ ಫಿಕ್ಸ್ ಮಾಡಿದೆ. ಹೆಣ್ಣು ಮಗುವಿಗೆ ನಾಲ್ಕು ಲಕ್ಷ, ಗಂಡು ಮಗುವಿಗೆ 6 ಲಕ್ಷ ರೂಪಾಯಿ ದರವನ್ನು ಈ ತಂಡ ನಿಗದಿ ಮಾಡಿತ್ತು. ಮೊದಲು ಅಡ್ವಾನ್ಸ್ ಆಗಿ ಒಂದೂವರೆ ಲಕ್ಷ ರೂಪಾಯಿ ನೀಡಬೇಕು. ಆನಂತರದ 15 ರಿಂದ 20 ದಿನದಿಳಗೆ ಮಗುವನ್ನು ನೀಡುವ ಪ್ರಕ್ರಿಯೆ ನಡೆಯುತಿತ್ತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.
Advertisement
Advertisement
ಸದ್ಯ ಮಂಗಳೂರಿನಲ್ಲಿ ಜಾಲ ಬೇಧಿಸಿರುವ ಪೊಲೀಸರು ಇದರ ಹಿಂದಿರುವ ಆರೋಪಿಗಳನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಮಂಗಳೂರು ನಗರ ಹೊರವಲಯದ ಮುಲ್ಕಿಯಲ್ಲಿ ಉದ್ಯಮ ನಡೆಸುತ್ತಿರುವ ರಾಯನ್ ಎಂಬಾತ ಈ ದಂಧೆಯಲ್ಲಿ ಶಾಮೀಲಾಗಿದ್ದು, ಮಗು ಮಾರಾಟ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಅಂತಾ ಹೇಳಲಾಗಿದೆ. ಹಾಸನ ಮೂಲದ ಮಗುವನ್ನು ಕಾರ್ಕಳದ ಕವಿತಾ ಎಂಬವರಿಗೆ ಮಾರಾಟ ಮಾಡುತ್ತಿದ್ದಾಗ ಆರೋಪಿ ರಾಯನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕವಿತಾ ಎಂಬಾಕೆಗೆ ಈ ಹಿಂದೆಯೂ ಒಂದು ಮಗು ನೀಡಿದ್ದು, ಇದು ಎರಡನೇ ಮಗುವಾಗಿದೆ..ಈ ಹಿನ್ನಲೆಯಲ್ಲಿ ಪೊಲೀಸರು ಕವಿತಾಳನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಪ್ರಕರಣದ ಬಗ್ಗೆ ಪೊಲೀಸರು ತೀವ್ರ ತನಿಖೆಯನ್ನು ಮುಂದುವರಿಸಿದ್ದು, ಇದರ ಹಿಂದೆ ಅತೀ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದೆ. ಪ್ರಪಂಚವನ್ನರಿಯದ ಮಗುವನ್ನು ಮಾರಾಟ ಮಾಡಿ ದುಡ್ಡು ಮಾಡುವ ನೀಚ ಮನಸ್ಥಿತಿಯ ಪಾಪಿಗಳ ಬಗ್ಗೆ ಜನರೂ ಜಾಗೃತವಾಗಿರಬೇಕಾಗಿದೆ.