– ಅರೆಬೆಂದ ಶವ ನೋಡಿ ದಂಗಾದ ಸ್ಥಳೀಯರು
– ಮಗುವಿನ ತಾಯಿಯನ್ನ ಪತ್ತೆ ಹಚ್ಚಿದ ಶ್ವಾನ
ಚೆನ್ನೈ: ಪಾಪಿ ಅಜ್ಜಿಯೊಬ್ಬಳು ಆಗ ತಾನೇ ಹುಟ್ಟಿದ ಗಂಡು ಮಗವನ್ನು ಸಜೀವವಾಗಿ ದಹನ ಮಾಡಿದ ಘಟನೆಯೊಂದು ತಮಿಳುನಾಡಿನ ಟೆನ್ಕಸಿಯ ಶಂಕರನ್ಕೋವಿಲ್ ಪ್ರದೇಶದಲ್ಲಿ ನಡೆದಿದೆ.
ರೈಲ್ವೆ ಫೀಡರ್ ರಸ್ತೆಯಲ್ಲಿ ಅರೆಬೆಂದ ಶಿಶುವಿನ ಶವವನ್ನು ಸ್ಥಳೀಯರು ಗಮನಿಸಿದ್ದಾರೆ. ಹೀಗಾಗಿ ಈ ಘಟನೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ. ಬೆಂಕಿ ಆರಿದ ಬಳಿಕ ಮಗುವಿನ ಮೃತದೇಹ ಕಂಡ ಪ್ರಯಾಣಿಕರು ಒಂದು ಬಾರಿ ಆಘಾತಕ್ಕೊಳಗಾದರು.
ಮಗುವಿನ ಮೃತದೇಹ ನೋಡಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಗುವಿನ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೆ ತನಿಖೆಗಾಗಿ ಶಂಕರನ್ಕೋವಿಲ್ ಪೊಲೀಸರು ಶ್ವಾನವನ್ನು ಘಟನಾ ಸ್ಥಳಕ್ಕೆ ಕರೆತಂದರು.
22 ವರ್ಷದ ಮಹಿಳೆಯ ಮನೆಗೆ ಸುಮಾರು 300 ಮೀಟರ್ ದೂರವಿದ್ದು, ಅಲ್ಲಿಯವರೆಗೆ ಶ್ವಾನ ಶವ ಪತ್ತೆಯಾದ ಸ್ಥಳದಿಂದ ಓಡಿದೆ. ಆರಂಭದಲ್ಲಿ ಹುಟ್ಟುವಾಗಲೇ ಮಗು ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದರು. ಆದರೆ ತನಿಖೆಯ ಬಳಿಕ ಹುಟ್ಟುವಾಗ ಮಗುವಿಗೆ ಜೀವ ಇತ್ತು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಶಂಕರ್ ಎಂಬಾತನ ಜೊತೆಗಿನ ಸಂಬಂಧದಿಂದ ಶಂಕರಗೋಮತಿ ಗರ್ಭಿಣಿಯಾಗಿದ್ದಾಳೆ. ಗರ್ಭಪಾತ ಮಾಡಿಕೊಳ್ಳುವ ಸಲುವಾಗಿ ಆಕೆ 2 ಮಾತ್ರೆಗಳನ್ನು ತೆಗೆದುಕೊಂಡಿದ್ದಳು. ಆದರೆ ಆ ಮಾತ್ರೆಗಳು ವ್ಯರ್ಥವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ಬುಧವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಮನೆಯಲ್ಲಿ ಹೆರಿಗೆಯಾಗಿದೆ ಎಂದು ವರದಿಯಾಗಿದೆ.
ಗಂಡು ಮಗು ಜನಿಸಿದ ಬಳಿಕ ಅದರ ಅಜ್ಜಿ, ಮಗುವನ್ನು ಬಟ್ಟೆಯಲ್ಲಿ ಸುತ್ತಿ ಥಿಯೇಟರ್ ಬಳಿ ತೆಗೆದುಕೊಂಡು ಹೋಗಿದ್ದಾಳೆ. ಅಲ್ಲದೆ ನವಜಾತ ಶಿಶುವಿಗೆ ಯಾರೋ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತ ನೈಜ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಮಗುವಿನ ಅಜ್ಜಿ ಹಾಗೂ ಶಂಕರ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಹೆರಿಗೆ ಬಳಿಕ ಅಸ್ವಸ್ಥಗೊಂಡಿರುವ 22 ವರ್ಷದ ಯುವತಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆ ಚೇತರಿಸಿಕೊಂಡ ಬಳಿಕ ಹೇಳಿಕೆ ಪಡೆಯಲಾಗುವುದು. ಹಾಗೂ ಅದಕ್ಕೆ ತಕ್ಕಂತೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.