ಬೆಂಗಳೂರು: ಕಳೆದ ಮೂರ್ನಾಲ್ಕು ದಿನದಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ನಾಯಕತ್ವ ಬದಲಾವಣೆ ವಿಚಾರ ಮತ್ತು ನಳಿನ್ ಕುಮಾರ್ ಆಡಿಯೋ ವಿಚಾರ ಸಂಬಂಧ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುವಷ್ಟು ದಡ್ಡರಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬೆಂಗಳೂರಿನ ವಿಜಯನಗರದ ಶಾಸಕರ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಏನೇ ಅಂದರು ಮುಖ್ಯಮಂತ್ರಿ ಬದಲಾವಣೆ ಇಲ್ಲ. ಈ ಬಗ್ಗೆ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಫೇಕ್ ಅನ್ನೋದನ್ನು ನಮ್ಮ ರಾಜ್ಯಧ್ಯಕ್ಷರೇ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳಿಗೆ ಆಡಿಯೋ ತನಿಖೆ ಮಾಡುವಂತೆ ಪತ್ರ ಬರೆದಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಇದು ಯಾರೋ ಮಾಡಿರುವ ಗಿಮಿಕ್. ಇವೆಲ್ಲಾ ಕೂಡ ಆಗಬಾರದು. ರಾಜ್ಯಾಧ್ಯಕ್ಷರಿಗೆ ತಮ್ಮದೇ ಆದಂತಹ ದೃಷ್ಠಿಕೋನ ಇರುತ್ತದೆ. ಅವರು ಈ ರೀತಿಯಲ್ಲ ಮಾತನಾಡುವಷ್ಟು ದಡ್ಡರಲ್ಲ ಎಂದಿದ್ದಾರೆ.
ನಳಿನ್ ಕುಮಾರ್ ಕಟೀಲ್‍ರವರು ಅನುಭವಿ ಅನ್ನುವುದಕ್ಕಿಂತ ಸಂಸ್ಕಾರವಂತರು, ಬುದ್ದಿವಂತರು ಘಟನೆಯಿಂದ ಅವರ ಮನಸ್ಸಿಗೂ ನೋವಾಗಿದೆ. ಈಗಾಗಲೇ ಮುಖ್ಯಮಂತ್ರಿಗಳಿಗೆ ಅವರು ಪತ್ರ ಬರೆದಿದ್ದಾರೆ. ಇದೆಲ್ಲ ದಾರಿ ತಪ್ಪಿಸುವ ಕೆಲಸ. ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ರಾಜ್ಯಾಧ್ಯಕ್ಷರಾಗಿ ಆ ರೀತಿ ಮಾತನಾಡುತ್ತಾರೆ ಅಂದರೆ ಅದಕ್ಕಿಂತ ಆಕ್ಷಾಮ ಅಪರಾಧ ಇನ್ನೊಂದಿಲ್ಲ. ಆದರೆ ಅವರು ಆ ರೀತಿ ಮಾಡಿಲ್ಲ. ಇದು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಯಡಿಯೂರಪ್ಪರನ್ನು ಗೌರವದಿಂದ ನಡೆಸಿಕೊಳ್ಳಿ, ಇಲ್ಲ ಬಿಜೆಪಿಗೆ ನಷ್ಟ: ಮುರುಘಾ ಶರಣರು