ಚಾಮರಾಜನಗರ: ನಮ್ಮ ಹುಲಿ ಯಾವತ್ತು ಹುಲಿಯೇ, ಸಿದ್ದರಾಮಯ್ಯ ಎಂದಿಗೂ ಹುಲಿಯೇ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ತಿರುಗೇಟು ನೀಡಿದ್ದಾರೆ.
ಇಂದು ಚಾಮರಾಜನಗರದಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೂ ಮೈಸೂರು ಇತಿಹಾಸದಲ್ಲಿಯೇ ಬಿಜೆಪಿಯವರು ಮೇಯರ್ ಆಗಿಲ್ಲ. ನಮ್ಮ ಹುಲಿ ಯಾವತ್ತು ಹುಲಿಯೇ. ಸಿದ್ದರಾಮಯ್ಯ ಎಂದಿಗೂ ಹುಲಿಯೇ. ಪ್ರತಾಪ್ ಸಿಂಹರವರದ್ದು ಹತಾಶೆ ಹೇಳಿಕೆ ಅಷ್ಟೇ ಎಂದು ಹೇಳಿದರು.
ನನ್ನನ್ನು ಮೇಯರ್ ಚುನಾವಣಾ ವೀಕ್ಷಕರಾಗಿ ನೇಮಿಸಲು ಕಾರಣ ಸಿದ್ದರಾಮಯ್ಯನವರು, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿದ್ದರಾಮಯ್ಯ ಆದೇಶದಂತೆ ವೀಕ್ಷಕರಾಗಿ ಕೆಲಸ ಮಾಡಿದ್ದೇವೆ. ಘಟನಾವಳಿ ನಡೆದಿದ್ದು ಆಕಸ್ಮಿಕ. ಜೆಡಿಎಸ್ ಬೆಂಬಲಿಸಲು ಆ ಸಮಯ ಸಂದರ್ಭದಲ್ಲಿ ಕಾರ್ಪೊರೇಟರ್ ಕೈಗೊಂಡ ನಿರ್ಧಾರವಾಗಿದೆ. ಈಗಾಗಲೇ ಘಟನೆ ಕುರಿತಂತೆ ಸಿದ್ದರಾಮಯ್ಯನವರ ಜೊತೆ ಕೂಡ ನಾನು ಮಾತಾನಾಡಿದ್ದೇನೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ವರದಿ ಕೇಳಿದ್ದಾರೆ. ಸೋಮವಾರ ಮೇಯರ್ ಚುನಾವಣೆ ಘಟನಾವಳಿ ಕುರಿತು ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಒಡಕು ಮೂಡಿರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮದು ದೊಡ್ಡ ಕುಟುಂಬ, ಎಲ್ಲರೂ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ. ಹಾಗೇನಾದರೂ ಇದ್ದಲ್ಲಿ ಇಂದು ಸಂಜೆ ಎರಡು ಬಣಗಳನ್ನು ಸೇರಿಸಿ ಒಂದು ಮಾಡುತ್ತೇವೆ ಭಿನ್ನಾಭಿಪ್ರಾಯ ಇದ್ದರೆ ಬಗ್ಗೆಹರಿಸುತ್ತೇನೆ. ಅಲ್ಲದೆ ಮೇಯರ್ ಚುನಾವಣೆ ಸಂಬಂಧ ಯಾರಿಗೂ ಕೂಡ ನೋಟಿಸ್ ಕೊಟ್ಟಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಿದ್ದು ತಪ್ಪು. ಪಕ್ಷದ ಆಂತರಿಕ ಸಮಸ್ಯೆ, ಪಕ್ಷದ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದರು.
ಮೊದಲಿನಿಂದಲೂ ವಚನಭ್ರಷ್ಟತೆಗೆ ಹೆಸರಾದವರು, ಕೊಟ್ಟ ಮಾತಿಗೆ ಎಂದು ನಡೆದಿಲ್ಲ. ಪಾಲಿಕೆ ಚುನಾವಣೆ ಒಡಂಬಡಿಕೆಯಂತೆ ನಡೆದುಕೊಂಡಿಲ್ಲ. ಈ ಬಾರಿ ಕಾಂಗ್ರೆಸ್ ಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟುಕೊಡದಂತೆ ಸಿದ್ದರಾಮಯ್ಯನವರು ಎರಡು ಬಾರಿ ದೂರವಾಣಿ ಕರೆ ಮಾಡಿ ಕೂಡ ಹೇಳಿದ್ದರು. ಡಿಕೆಶಿ ಸಹ ಮೇಯರ್ ಸ್ಥಾನ ಉಳಿಸಿಕೊಳ್ಳುವಂತೆ ತಿಳಿಸಿದ್ದರು. ಹೀಗಾಗಿ ಚುನಾವಣೆ ವೇಳೆ 12 ಗಂಟೆಯವರೆಗೂ ಮಾಜಿ ಶಾಸಕ ವಾಸು, ಸೋಮಶೇಖರ್ ಹೀಗೆ ಎಲ್ಲರೂ ಒಟ್ಟಿಗೆ ಕುಳಿತಿದ್ದೇವು. ಆದರೆ ಚುನಾವಣೆ ಪ್ರಕ್ರಿಯೆಗೆ ಕಾರ್ಪೊರೇಟರ್ ಹೋದ ಬಳಿಕ ಅವರ ನಿರ್ಧಾರ ಬದಲಾಗಿದೆ. ಪಾಲಿಕೆಯಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಸವಿವರ ಪಡೆದು ಸೋಮವಾರ ಅಧ್ಯಕ್ಷರ ಕೈಗೆ ವರದಿ ಸಲ್ಲಿಸುತ್ತೇನೆ ಎಂದು ಹೇಳಿದರು.