ಬೆಂಗಳೂರು: ನೋಟಿಸ್ ಹಿನ್ನೆಲೆಯಲ್ಲಿ ಸಿಡಿ ಲೇಡಿಯ ಕುಟುಂಬ ಸದಸ್ಯರು ಇಂದು ವಿಶೇಷ ತನಿಖಾ ತಂಡ(ಎಸ್‍ಐಟಿ) ಮುಂದೆ ಹಾಜರಾದರು. ಆಡುಗೋಡಿಯ ಟೆಕ್ನಿಕಲ್ ಸೆಲ್‍ನಲ್ಲಿ ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಎಸ್‍ಐಟಿ ಪೊಲೀಸರು ನಿರಂತರವಾಗಿ ವಿಚಾರಣೆ ನಡೆಸಿದರು.
ಖುದ್ದು ಎಸ್‍ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ,ಸಂದೀಪ್ ಪಾಟೀಲ್ ಮುಂದೆ ನಿಂತು ಪೋಷಕರಿಗೆ ಧೈರ್ಯ ತುಂಬಿ, ವಿಚಾರಣೆಗೆ ಒಳಪಡಿಸಿದರು. ಯುವತಿಯ ತಂದೆ, ತಾಯಿ, ಸಹೋದರ ಹೀಗೆ ಎಲ್ಲರನ್ನು ಪ್ರತ್ಯೇಕವಾಗಿ ಕೂರಿಸಿ ಹತ್ತು ಹಲವು ಪ್ರಶ್ನೆಗಳನ್ನು ಎಸ್‍ಐಟಿ ಅಧಿಕಾರಿಗಳು ಕೇಳಿದ್ದಾರೆ.
ನಿಮ್ಮ ಮಗಳನ್ನು ನೀವು ಕೊನೆಯ ಬಾರಿ ಭೇಟಿಯಾಗಿದ್ದು ಯಾವಾಗ? ಎಷ್ಟು ಬಾರಿ ಕರೆ ಬಂದಿತ್ತು. ಏನು ಹೇಳಿದ್ರು? ನಿನ್ನೆ ವೈರಲ್ ಆಡಿಯೋ ನಿಮ್ಮದಾ? ಯುವತಿಯ ವ್ಯಕ್ತಿತ್ವ ಹೇಗಿತ್ತು? ಗೆಳೆಯರ ವಿವರವೇನು? ಇದರ ಬಗ್ಗೆ ನಿಮಗೆ ಮೊದಲೇ ಗೊತ್ತಿತ್ತಾ? ಯಾರಾದರೂ ನಿಮ್ಮನ್ನು ಹೆದರಿಸಿದ್ರಾ? ಹೇಗೆ ತರಹೇವಾರಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಪೋಷಕರು ಹೇಳಿದ್ದೇನು?
ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡರೇ ನಾವು ಉಳಿಯುವುದಿಲ್ಲ. ನಮ್ಮ ಮಗಳು ಅಂಥವಳಲ್ಲ. ಏನಿಗಿದ್ಯೋ ಗೊತ್ತಾಗಿಲ್ಲ. 2 ಬಾರಿ ಮಾತಾಡಿದ್ದು ಬಿಟ್ರೆ ನಂತರ ಸಂಪರ್ಕಿಸಿಲ್ಲ. ನಮ್ಮ ಮಗಳನ್ನು ಯಾವುದೋ ಗ್ಯಾಂಗ್ ಕಿಡ್ನಾಪ್ ಮಾಡಿದೆ. ನಮ್ಮ ಮಗಳು ಯಾರಿಂದಲೋ ಒತ್ತಡಕ್ಕೆ ಒಳಗಾಗಿದ್ದಾಳೆ.
ಆಕೆ ಹೇಳುತ್ತಿರುವ ವಿಚಾರಗಳು ಸ್ವಯಂಪ್ರೇರಿತವಾಗಿಲ್ಲ. ವೀಡಿಯೋ ನೋಡಿದರೆ ಒತ್ತಡದಲ್ಲಿ ಇರುವುದು ಗೊತ್ತಾಗುತ್ತದೆ. ಯಾರೋ ತಮಗೆ ಬೇಕಾದ ರೀತಿ ಹೇಳಿಕೆ ಕೊಡಿಸುತ್ತಿದ್ದಾರೆ. ಮಗಳು ನಮ್ಮ ಮುಂದೆ ಬಂದರೆ ಅಸಲಿ ಸತ್ಯ ಗೊತ್ತಾಗುತ್ತದೆ. ನಿನ್ನೆ ವೈರಲ್ ಆದ ವಿಡಿಯೋದಲ್ಲಿ ನಮ್ಮದೇ ಧ್ವನಿಯಿದೆ. ಅದು ಹೇಗೆ ಹೊರಗೆ ಬಂತು ಎನ್ನುವುದು ಗೊತ್ತಿಲ್ಲ.