– ಧೋನಿ ಬಗ್ಗೆ ಚಹಲ್ ಮನದಾಳದ ಮಾತು
ನವದೆಹಲಿ: ನನ್ನ ಮತ್ತು ಕುಲ್ದೀಪ್ ಯಾದವ್ ಸಮಸ್ಯೆಗಳಿಗೆ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಬಳಿ ಪರಿಹಾರ ಸಿಗುತ್ತೆ ಎಂದು ಸ್ಪಿನ್ನರ್ ಯುಜುವೇಂದ್ರ ಚಹಲ್ ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಚಹಲ್ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಧೋನಿ ನಮ್ಮ ಪ್ರಾಬ್ಲಂ ಸಾಲ್ವರ್. ಹಲವು ಬಾರಿ ಮೈದಾನದಲ್ಲಿ ಧೋನಿ ನಮ್ಮ ಸಮಸ್ಯೆಯನ್ನ ಪರಿಹರಿಸಿದ್ದಾರೆ. ಇಂತಹ ಘಟನೆಗಳು ಹಲವು ಬಾರಿ ನಡೆದಿವೆ. ಪಂದ್ಯದ ವೇಳೆ ಧೋನಿ ನೀಡುವ ಸಲಹೆಗಳಿಂದಲೇ ವಿಕೆಟ್ ಪಡೆದಿದ್ದೇನೆ. ಯಾರಿಗೆ, ಯಾವಾಗ, ಹೇಗೆ ಬೌಲಿಂಗ್ ಮಾಡಬೇಕೆಂಬುದರ ಕುರಿತು ಧೋನಿ ನೀಡುವ ಸಲಹೆಗಳು ತಂಡದ ಗೆಲುವಿಗೆ ಕಾರಣವಾಗಿರುತ್ತೆ ಎಂದಿದ್ದಾರೆ.
ಭಾರತ ಮಹೇಂದ್ರ ಸಿಂಗ್ ಧೋನಿ ಎಂಬ ಅದ್ಭುತ ಕ್ರೀಡಾಪಟುವನ್ನು ನೀಡಿದೆ. ಪಂದ್ಯದ ವೇಳೆ ನನಗೆ ಮತ್ತು ಕುಲ್ದೀಪ್ ಗೆ ಸಲಹೆ ನೀಡುತ್ತಿರುತ್ತಾರೆ. ಬ್ಯಾಟ್ಸಮನ್ ಗಳು ನಮ್ಮ ಬೌಲಿಂಗ್ ನಲ್ಲಿ ಸಿಕ್ಸ್ ಮತ್ತು ಫೋರ್ ಬಾರಿಸುತ್ತಿದ್ರೆ, ನಮ್ಮ ಬಳಿ ಬಂದು ಹೆಗಲ ಮೇಲೆ ಕೈ ಇಟ್ಟು, ಗೂಗ್ಲಿ ಎಸೆ, ಈತನಿಗೆ ಆಡಲು ಆಗಲ್ಲ ಅಂತಾ ಹೇಳ್ತಾರೆ. ಧೋನಿ ಸಲಹೆಯಂತೆ ಗೂಗ್ಲಿ ಎಸೆದಾಗ ನಾನು ವಿಕೆಟ್ ಪಡೆದಿದ್ದೇನೆ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.
ಸೌಥ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಸಲಹೆಯಂತೆ ಬೌಲಿಂಗ್ ಮಾಡಿದ್ದರಿಂದ 5 ವಿಕೆಟ್ ಪಡೆಯಲು ಸಾಧ್ಯವಾಯ್ತು. ಜೆಪಿ ಡುಮಿನಿ ಬಹಳ ಸಮಯದವರೆಗೆ ಕ್ರಿಸ್ ನಲ್ಲಿದ್ದರು. ಅವರ ವಿಕೆಟ್ ಪಡೆಯಬೇಕೆಂದು ಕಾಯುತ್ತಿದ್ದೆ. ಆ ವೇಳೆ ಧೋನಿ, ನೇರವಾಗಿ ಸ್ಟಂಪ್ ಗುರಿಯಾಗಿಸಿ ಬಾಲ್ ಎಸೆಯಲು ಹೇಳಿದ್ರು. ಅವರ ಮಾತು ಕೇಳಿ ಸ್ಟಂಪ್‍ಗೆ ಬಾಲ್ ಎಸೆದಾಗ ಡುಮಿನಿ ಎಲ್‍ಬಿಡಬ್ಲ್ಯೂ ಆಗಿ ಔಟಾದರು ಎಂದು ಹೇಳಿದರು.