ಬೆಂಗಳೂರು: ಎಸ್‍ಡಿಪಿಐ ನಿಷೇಧ ವಿಚಾರ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.
ವಿಧಾನಸೌಧದ ಬಳಿ ಮಾತನಾಡಿದ ಸಿಟಿ ರವಿ ಅವರು, ಯಾವುದೇ ಒಂದು ಘಟನೆ ಮೇಲೆ ನಿಷೇಧದಂತಹ ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದರೆ ಈ ಹಿಂದೆ ನಡೆದಿರುವ ಹಲವಾರು ಸಮಾಜ ಘಾತುಕ ಘಟನೆಗಳ ಬಗ್ಗೆ ಕೂಡ ಸಾಕ್ಷಾಧಾರ ಕಲೆ ಹಾಕುವ ಕೆಲಸ ಆಗುತ್ತಿದೆ. ಯಾವುದೇ ಸಮಾಜ ಘಾತುಕ ಶಕ್ತಿಗಳನ್ನು ಸಹಿಸಿಕೊಳ್ಳುವ ಪ್ರಶ್ನೆ ಇಲ್ಲ. ನಾಳೆ ದಿನ ಕೋರ್ಟಿನಲ್ಲೂ ಈ ಕುರಿತಂತೆ ಉತ್ತರ ನೀಡಬೇಕಾದ ಸಂದರ್ಭ ಎದುರಾಗುತ್ತದೆ. ಆದ್ದರಿಂದ ಅದಕ್ಕೆ ಬೇಕಾದ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.
Advertisement
Advertisement
ಕೆಲವರು ರಾಜಕೀಯ ಕಾರಣಗಳಿಗಾಗಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅವರಿಗೆ ಅಕ್ಕಿ ಮೇಲೆ ಆಸೆ, ಅಕ್ಕನ ಮಕ್ಕಳ ಮೇಲೂ ಪ್ರೀತಿ ಅನ್ನೋ ರೀತಿ ಮಾಡುತ್ತಿದ್ದಾರೆ. ಮತ ಬ್ಯಾಂಕ್ ರಾಜಕೀಯ ಇನ್ನಾದರೂ ಕಾಂಗ್ರೆಸ್ ನಾಯಕರು ಬಿಡಲಿ. ಯಾವುದೇ ಸಂಘಟನೆ ತಪ್ಪು ಮಾಡಿದರೂ ನಾವು ಅವರನ್ನು ಬಿಡುವುದಿಲ್ಲ. ನಮ್ಮದೇನಿದ್ದರೂ ಏಕ್ ಮಾರ್ ದೋ ತುಕ್ಡಾ ಕ್ರಮ. ಬೆಂಗಳೂರು ಗಲಭೆಯಲ್ಲಿ ಉಂಟಾಗಿರುವ ಆಸ್ತಿ ನಷ್ಟವನ್ನು ಅವರಿಂದಲೇ ತುಂಬಿಸುತ್ತೇವೆ ಎಂದರು.
Advertisement
Advertisement
ಇದೇ ವೇಳೆ ತಮ್ಮ ದೆಹಲಿ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಭೇಟಿ ಫಲಪ್ರದವಾಗಿದೆ. ನಾನು ಅಂದುಕೊಂಡ ಎಲ್ಲಾ ಕೆಲಸ ಈಡೇರಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸದಾನಂದ ಗೌಡರು ಸಹಕಾರ ನೀಡಿದ್ದು, ನನ್ನ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕೆಲಸ ಯಶಸ್ವಿಯಾಗಿದೆ. ಮೈಸೂರಿನಲ್ಲಿ ಸ್ವಾಯತ್ತ ಕೇಂದ್ರ ಮಾಡಲು ಎಚ್‍ಆರ್ ಡಿ ಮಿನಿಸ್ಟರ್ ಭರವಸೆ ನೀಡಿದ್ದಾರೆ. ಖೇಲೋ ಇಂಡಿಯಾದಲ್ಲಿ ಕರ್ನಾಟಕ ಹೆಚ್ಚು ಸಹಕಾರ ನೀಡಲು ಕೇಂದ್ರದ ಸಚಿವರಿಗೆ ಮನವಿ ಮಾಡಿದ್ದೇವೆ. ನಮ್ಮ ಮನವಿ ಹಾಗೂ ಬೇಡಿಕೆಗಳಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.