ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಕೇಸ್ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಈಗಾಗಲೇ ಸಿಸಿಬಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಸಿನಿಮಾಗೆ ಬಂಡವಾಳ ಹಾಕಿದ ಕೆಲ ನಿರ್ಮಾಪಕರಿಗೆ ಟೆನ್ಷನ್ ಆರಂಭವಾಗಿದೆ.
ಹೌದು. ಕೊರೊನಾ ವೈಸರ್ ಭೀತಿಯಿಂದ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಇಡೀ ಚಿತ್ರರಂಗವೇ ಕಂಗಾಲಾಗಿತ್ತು. ಈ ಮಧ್ಯೆ ಇದೀಗ ಡ್ರಗ್ಸ್ ಮಾಫಿಯಾ ಹಿಂದೆ ಇರುವ ನಟ-ನಟಿಯರ ಬಣ್ಣ ಒಂದೊಂದಾಗಿ ಬಯಲಾಗುತ್ತಿದೆ. ಪರಿಣಾಮ ಈಗಾಗಲೇ ಹಣ ಹೂಡಿಕೆ ಮಾಡಿರುವ ನಿರ್ಮಾಪಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಡ್ರಗ್ಸ್ ಕೇಸಿನಲ್ಲಿ ರಾಗಿಣಿ ಅರೆಸ್ಟ್ ಆಗಿರುವುದರಿಂದ ನಿರ್ಮಾಪಕರೊಬ್ಬರಿಗೆ ದೊಡ್ಡ ತಲೆನೋವು ಎದುರಾಗಿದೆ. ಇದೇ ವಿಚಾರವಾಗಿ ಚಿತ್ರತಂಡ ವಾಣಿಜ್ಯ ಮಂಡಳಿಗೆ ಮನವಿ ಪತ್ರ ನೀಡಿದ್ದು, ಈ ವಿಚಾರದಲ್ಲಿ ಚಿತ್ರತಂಡಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದೆ. ಪ್ರೇಮ್ ಹಾಗೂ ರಾಗಿಣಿ ಅಭಿನಯದ ಸಿನಿಮಾ “ಗಾಂಧಿಗಿರಿ” ಸದ್ಯ ಶೇ.80 ಚಿತ್ರೀಕರಣ ಮುಗಿಸಿದ್ದು, ಇದೇ ತಿಂಗಳು 14ರಿಂದ ಮತ್ತೆ ಶೂಟಿಂಗ್ ಶುರುವಾಗಬೇಕಿತ್ತು. ಆದರೆ ಇದೀಗ ರಾಗಿಣಿ ಸಿಸಿಬಿ ಕಸ್ಟಡಿಯಲ್ಲಿದ್ದರಿಂದ ಚಿತ್ರತಂಡ ನಮಗೆ ರಾಗಿಣಿ ಬೇಕೇ ಬೇಕು ಎಂದು ಹಠ ಹಿಡಿದಿದೆ.
ಪತ್ರದಲ್ಲೇನಿದೆ..?
ಕರ್ನಾಟಕ ಚಲಚನಚಿತ್ರ ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ, ಪ್ರೇಮ್, ರಾಗಿಣಿ, ಅರುಂಧತಿ ನಾಗ್, ಜೆ.ಡಿ ಚಕ್ರವರ್ತಿ, ರಂಗಾಯಣ ರಘು ಮುಂತಾದ ತಾರಬಳಗವಿರುವ ರಘು ಹಾಸನ್ ನಿರ್ದೇಶನದ ”ಗಾಂಧಿಗಿರಿ” ಎಂಬ ಸಿನಿಮಾವನ್ನು ನಿರ್ಮಿಸುತ್ತಿದ್ದೇವೆ. ಇದೀಗ ಸಿನಿಮಾ ನಿರ್ಮಾಣ ಹಂತದಲ್ಲಿದ್ದು ಶೇ.80ರಷ್ಟು ಚಿತ್ರೀಕರಣಗೊಂಡಿದೆ. ಇನ್ನೂ ಶೇ.20ರಷ್ಟು ಬಾಕಿ ಇದೆ. ಹೀಗಿರುವಾಗ ಇದೇ ತಿಂಗಳು 14ರಿಂದ ಉಳಿದ ಭಾಗದ ಚಿತ್ರೀಕರಣ ಮಾಡುವ ಯೋಜನೆಯಲ್ಲಿದ್ದೇವೆ. ಅದಕ್ಕೆ ಪೂರಕವಾಗಿ ಎಲ್ಲಾ ಕಲಾವಿದರು, ತಂತ್ರಜ್ಞರು ಒಪ್ಪಿಗೆ ಸೂಚಿಸಿದ್ದರು. ಆದರೆ ಇದೀಗ ರಾಗಿಣಿಯವರ ವಿಷಯದಲ್ಲಿ ಆಗಿರುವ ಬೆಳವಣಿಗೆಯಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಜೊತೆಗೆ ಇದರಿಂದ ಚಿತ್ರೀಕರಣದ ಭವಿಷ್ಯ ಏನೆಂದು? ಚಿತ್ರತಂಡ ಕಂಗಾಲಾಗಿದೆ.
ಇಷ್ಟಲ್ಲದೆ ನಾನು ಈಗಾಗಲೇ ಗಾಂಧಿಗಿರಿ ಚಿತ್ರದ ಮೇಲೆ ಬಹಳಷ್ಟು ಹಣ ಹೂಡಿದ್ದು ಹಾಗೂ ಇನ್ನುಳಿದ ಚಿತ್ರೀಕರಣಕ್ಕೆ ಬೇಕಾಗಿರುವ ಹಣವನ್ನು ಬಡ್ಡಿಗೆ ತಂದಿದ್ದೇನೆ. ಸದ್ಯ ಮುಂದಿನ ದಾರಿ ತಿಳಿಯದೇ ಕಳವಳವಾಗಿದೆ. ಇಂತಹ ಸಮಯದಲ್ಲಿ ನಮಗೆ ಇರುವ ಒಂದೇ ಭರವಸೆಯ ದಾರಿ ಕರ್ನಾಟಕ ವಾಣಿಜ್ಯ ಮಂಡಳಿ ಎಂದು ಭಾವಿಸಿ ನಿಮ್ಮಲ್ಲಿಗೆ ಬಂದಿರುತ್ತೇವೆ. ದಯವಿಟ್ಟು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಚಿತ್ರೀಕರಣ ಸುಸೂತ್ರವಾಗಿ ನಡೆಸಲು ಬೇಕಾದಂತಹ ಸಹಕಾರವನ್ನು ಮಾಡಿಕೊಡಬೇಕು ಎಂದು ಪತ್ರದ ಮೂಲಕ ಕೇಳಿಕೊಳ್ಳುವುದಾಗಿ ನಿರ್ಮಾಪಕ ರಾಜೇಶ್ ಪಟೇಲ್ ಹಾಗೂ ನಿರ್ಮಾಪಕ ರಘು ಹಾಸನ್ ಮನವಿ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಡ್ರಗ್ಸ್ ಕೇಸಿನಲ್ಲಿ ನಟ-ನಟಿಯರ ಹೆಸರು ಕೇಳಿಬರುತ್ತಿದ್ದಂತೆಯೇ ಭಾರೀ ಚರ್ಚೆ ಆರಂಭವಾಗಿದೆ. ಈ ಮಧ್ಯೆ ಕೆಲವರು ಇಂತಹ ನಟಿಯರನ್ನು ಚಿತ್ರರಂಗದಿಂದ ಬಹಿಷ್ಕಾರ ಹಾಕಬೇಕೆಂದು ಆಗ್ರಹಿಸುತ್ತಿದ್ದಾರೆ.