ನಮಗೆ ಮೀಸಲಾತಿ ಬಗ್ಗೆ ಪಾಠ ಮಾಡುವ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

Public TV
3 Min Read
Siddarmaiah 5

ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ನೀಟ್ ಮೂಲಕ ಅಖಿಲ ಭಾರತ ಕೋಟಾದಡಿಯಲ್ಲಿ ಸೇರ್ಪಡೆಗೊಳ್ಳುವ ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಶೇ.27ರಷ್ಟು ಮೀಸಲಾತಿ ನೀಡುವ ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಆದರೆ ಇದೀಗ ಬಿಜೆಪಿ ಈ ಬಗ್ಗೆ ಬೇರೆ ರೀತಿ ಉತ್ತರ ಕೊಡುತ್ತಿದೆ. ಮೀಸಲಾತಿ ಬಗ್ಗೆ ನಮಗೆ ಪಾಠ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುಡುಗಿದ್ದಾರೆ.

Modi

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಲೈ ಮೂರರಂದು ಸೋನಿಯಾ ಗಾಂಧಿಯವರು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನ ಸೆಳೆದಿದ್ದರು. ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ ಅಖಿಲ ಭಾರತ ಕೋಟಾದಡಿಯಲ್ಲಿ ಪಡೆದಿರುವ ಶೇಕಡಾ 15ರಷ್ಟು ಸೀಟುಗಳಲ್ಲಿಯೂ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದರು. ಮೀಸಲಾತಿ ನಿರಾಕರಣೆಯಿಂದಾಗಿ 2017ರಿಂದ 11000 ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿರುವುದನ್ನು ಸೋನಿಯಾ ಗಾಂಧಿಯವರು ಪತ್ರದಲ್ಲಿ ಉಲ್ಲೇಖಿಸಿ ಅಖಿಲಭಾರತ ಕೋಟಾದಲ್ಲಿಯೂ ಒಬಿಸಿಗಳಿಗೆ ಮೀಸಲಾತಿ ನೀಡಬೇಕೆಂದು ಆಗ್ರಹ ಪಡಿಸಿದ್ದರು. ಇದಕ್ಕಾಗಿ ಸೋನಿಯಾಗಾಂಧಿಯವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

soniya gandhi medium

ನನ್ನ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಹತ್ತು ವರ್ಷ ಯುಪಿಎ ಸರ್ಕಾರವಿದ್ದಾಗ ಒಬಿಸಿ ಮೀಸಲು ಬಗ್ಗೆ ಸೋನಿಯಾಗಾಂಧಿ ಅವರಿಗೆ ಜ್ಞಾನ ಇರಲಿಲ್ಲವೇ? ಎಂದು ಪ್ರಶ್ನಿಸಿದೆ. ಬಿಜೆಪಿಯ ಬಡವರ, ರೈತರ, ದಲಿತರ, ಹಿಂದುಳಿದ ಜಾತಿಗಳ ವಿರೋಧಿ ಎನ್ನುವದು ನನಗೆ ಗೊತ್ತಿದೆ. ಆದರೆ ಈ ಪಕ್ಷ ಇಷ್ಟೊಂದು ಬೌದ್ದಿಕ ದಿವಾಳಿತನದಿಂದ ಬಳಲುತ್ತಿದೆ ಎಂದು ಗೊತ್ತಿರಲಿಲ್ಲ. ಇತ್ತೀಚಿನ ಇತಿಹಾಸವನ್ನಾದರೂ ಸರಿಯಾಗಿ ಓದಿಕೊಂಡು ಪ್ರತಿಕ್ರಿಯಿಸಿ ಎಂದು ಅವರಿಗೆ ವಿನಯಪೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ: ಅಭಿಷೇಕ್ ಅಂಬರೀಶ್

ಬಿಜೆಪಿ ನಾಯಕರ ಗಮನಕ್ಕಾಗಿ ಕೆಲವು ವಾಸ್ತವಾಂಶಗಳನ್ನು ಮುಂದಿಡ ಬಯಸುತ್ತೇನೆ. ಮೊದಲನೇಯದಾಗಿ, ದೇಶದಲ್ಲಿಯೇ ಮೊದಲಬಾರಿ ಅತ್ಯಂತ ವೈಜ್ಞಾನಿಕವಾದ ಎಲ್.ಜಿ ಹಾವನೂರು ವರದಿಯ ಅನುಷ್ಠಾನದ ಮೂಲಕ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ತಂದುಕೊಟ್ಟಿರುವುದು ರಾಜ್ಯದ ದೇವರಾಜ್ ಅರಸು ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ.

Manmohan Singh

ಎರಡನೇಯದಾಗಿ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಸಂವಿಧಾನಕ್ಕೆ 104ನೇ ತಿದ್ದುಪಡಿ ಮಾಡಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿರುವ ಐಐಟಿ ಮತ್ತು ಐಐಎಂ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಜಾರಿಗೆ ತರಲಾಯಿತು. ವಿ.ಪಿ ಸಿಂಗ್ ಅವರು ಮಂಡಲವರದಿ ಅನುಷ್ಠಾನದ ಮೂಲಕ ಹಿಂದುಳಿದ ಜಾತಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದ್ದರು. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರಾಗಿದ್ದ ಅರ್ಜುನ್ ಸಿಂಗ್ ಅವರು ಶಿಕ್ಷಣ ಕ್ಷೇತ್ರದಲ್ಲಿಯೂ ಹಿಂದುಳಿದ ಜಾತಿಗಳಿಗೆ ಸಂವಿಧಾನಕ್ಕೆ 104ನೇ ತಿದ್ದುಪಡಿಯ ಮೂಲಕ ಮೀಸಲಾತಿ ಕಲ್ಪಿಸಿದ್ದರು ಎಂದು ಮಾಹಿತಿ ಹಂಚಿಕೊಂಡರು.

ಮನಮೋಹನ್ ಸಿಂಗ್ ಸರ್ಕಾರ, ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ನಿರ್ಧಾರ ಕೈಗೊಂಡಾಗ ಅದನ್ನು ವಿರೋಧಿಸಿದ್ದು ಬಿಜೆಪಿ. ಭಾರತೀಯ ಜನತಾ ಪಕ್ಷ ಸೈದ್ಧಾಂತಿಕವಾಗಿ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಗೆ ವಿರುದ್ಧವಾಗಿರುವ ಪಕ್ಷ. ಆರ್‍ಎಸ್‍ಎಸ್‍ನ ಮೋಹನ್ ಭಾಗವತ ಅವರು ಬಹಿರಂಗವಾಗಿಯೇ ಮೀಸಲಾತಿ ವಿರೋಧಿಸಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ದಿವಂಗತ ನ್ಯಾಯಮೂರ್ತಿ ರಾಮಾ ಜೋಯಿಸ್ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದರು. ಹುಟ್ಟಿನಿಂದಲೇ ಮೀಸಲಾತಿ ವಿರೋಧಿಯಾದ ಬಿಜೆಪಿ ಈಗ ರಾಜಕೀಯ ಅನಿವಾರ್ಯತೆಗೆ ಸಿಕ್ಕಿ ಮೀಸಲಾತಿಯನ್ನು ಒಪ್ಪಿಕೊಂಡಿದೆ ಅಷ್ಟೆ. ನಮ್ಮದು ಬದ್ಧತೆ, ಬಿಜೆಪಿಯದ್ದು ಆತ್ಮವಂಚನೆಯ ನಾಟಕ ಎಂದು ವಾಗ್ದಾಳಿ ನಡೆಸಿದರು.

Supreme Court

ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ ಶೇಕಡಾ 15ರಷ್ಟು ಸೀಟುಗಳನ್ನು ಅಖಿಲಭಾರತ ಕೋಟಾಕ್ಕಾಗಿ ಕಿತ್ತುಕೊಂಡಿರುವುದೇ ಮಹಾದ್ರೋಹ. ಈ ನಿರ್ಧಾರವನ್ನು ಕೈಗೊಂಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ನಮ್ಮ ಭೂಮಿ, ನಮ್ಮವರ ತೆರಿಗೆ ಹಣದಿಂದ ನೀಡಿರುವ ವಿನಾಯಿತಿ-ರಿಯಾಯಿತಿಯಿಂದ ನಿರ್ಮಾಣಗೊಂಡ ವೈದ್ಯಕೀಯ ಕಾಲೇಜುಗಳ ಸೀಟನ್ನು ಬೇರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ಯಾಕೆ ಉಡುಗೊರೆಯಾಗಿ ನೀಡಬೇಕು? ಬಿಜೆಪಿ ನಾಯಕರು ಉತ್ತರಿಸಬೇಕಾಗುತ್ತದೆ ಎಂದರು.

ಅಖಿಲಭಾರತ ಕೋಟಾಕ್ಕಾಗಿ ರಾಜ್ಯದ ಮೆಡಿಕಲ್ ಕಾಲೇಜುಗಳ ಸೀಟುಗಳನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುವುದನ್ನು ನಾನು ಮುಖ್ಯಮಂತ್ರಿಯಾಗಿರುವಾಗಲೇ ವಿರೋಧಿಸಿದ್ದೆ. ತಮಿಳುನಾಡು ಸರ್ಕಾರ ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದೆ. ಅದರ ಮುಂದಿನ ವಿಚಾರಣೆ ಆಗಸ್ಟ್ 3ಕ್ಕೆ ಇದೆ. ನ್ಯಾಯಾಲಯದ ತೀರ್ಪಿನಿಂದ ಮುಖ ಉಳಿಸಿಕೊಳ್ಳಲು ನರೇಂದ್ರ ಮೋದಿ ಸರ್ಕಾರ ಅಖಿಲಭಾರತ ಕೋಟಾದಡಿಯಲ್ಲಿಯೂ ಒಬಿಸಿಗಳಿಗೆ ಶೇಕಡಾ 27ರಷ್ಟು ಮೀಸಲಾತಿಯನ್ನು ಘೋಷಿಸಿದೆ. ಹಿಂದುಳಿದ ಜಾತಿಯ ಬಗ್ಗೆ ಪ್ರಧಾನಿಗಳ ಈ ಕಾಳಜಿಯ ನಾಟಕಕ್ಕೆ ಮುಂಬರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯೂ ಕಾರಣವಾಗಿರಬಹುದು. ಉಳಿದಂತೆ ಪ್ರಧಾನಿಯವರ ಈ ಘೋಷಣೆಯಲ್ಲಿ ಯಾವುದೇ ಬದ್ಧತೆ ಇಲ್ಲ ಎಂದು ಟೀಕೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *