ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಭಾವನಾ ಮೆನನ್ ತಮ್ಮ ಬಹು ಕಾಲದ ಗೆಳೆಯ ನವೀನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದೀಗ ನಟಿ ಭಾವನಾ ತಮ್ಮ ಪ್ರೀತಿಯ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ನಟಿ ಭಾವನಾ ಕನ್ನಡದ ನಟ ಮತ್ತು ನಿರ್ಮಾಪಕ ನವೀನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ನಟಿ ಭಾವನಾ ಪತಿಯ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದು, ತಮ್ಮಿಬ್ಬರ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ನಟಿ ಭಾವನಾ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಪ್ರೀತಿ ಯಾವಾಗ, ಎಲ್ಲಿ ಆಯಿತು ಎಂಬುದನ್ನು ತಿಳಿಸಿದ್ದಾರೆ. “ರೋಮಿಯೋ ಸಿನಿಮಾಗೆ 8 ವರ್ಷ ಆಗಿದೆ. ಅದೇ ರೀತಿ ನಮ್ಮ ಪ್ರೀತಿಗೆ 9 ವರ್ಷ ಆಗಿದೆ. ಈ ಸಿನಿಮಾ ನನಗೆ ನನ್ನ ರೋಮಿಯೋವನ್ನು ನೀಡಿದೆ. ನಾವು ಹೇಗೆ ಭೇಟಿ ಆದೆವು, ಪ್ರೀತಿಯಲ್ಲಿ ಬಿದ್ದೆವು ಎನ್ನುವುದು ಮ್ಯಾಜಿಕ್. ಅಲ್ಲದೇ ನಾನು ಹೇಗೆ ನಿಮ್ಮ ಜೊತೆ ಜೀವನ ಪೂರ್ತಿ ಕಳೆಯಲು ನಿರ್ಧರಿಸಿದೆ ಎಂಬುದು ಗೊತ್ತಿಲ್ಲ. ಆದರೆ ನನ್ನ ಜೀವನಕ್ಕೆ ಬಂದಿದ್ದಕ್ಕಾಗಿ ಮತ್ತು ನಿಮ್ಮ ಪ್ರೀತಿಯಲ್ಲಿ ಬಿದ್ದಿದ್ದಕ್ಕೆ ಧನ್ಯವಾದಗಳು. 9 ವರ್ಷ ಜೊತೆಗಿದ್ದೀವಿ” ಎಂದು ತಮ್ಮ ಪ್ರೇಮ ವಾರ್ಷಿಕೋತ್ಸವಕ್ಕೆ ಶುಭಾಶಯ ತಿಳಿಸಿದ್ದಾರೆ.
ನವೀನ್ ‘ರೋಮಿಯೋ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ರೋಮಿಯೋ’ ಸಿನಿಮಾ 2012 ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‍ಗೆ ನಾಯಕಿಯಾಗಿ ಭಾವನಾ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾದಿಂದ ಇವರಿಬ್ಬರ ಪರಿಯಚವಾಗಿದೆ. ಪರಿಯಚ ಸ್ನೇಹವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ಜೋಡಿ 2018ರಲ್ಲಿ ಕೇರಳದ ತ್ರಿಶೂರ್‌ನ ತಿರುವಂಬಾಡಿ ದೇವಸ್ಥಾನದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭಾವನಾ ಅನೇಕ ಕನ್ನಡದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸದ್ಯಕ್ಕೆ ಮೂರು ಕನ್ನಡದ ಸಿನಿಮಾದಲ್ಲಿ ಭಾವನಾ ಬ್ಯುಸಿಯಾಗಿದ್ದಾರೆ. ‘ಭಜರಂಗಿ-2’, ‘ಇನ್ಸ್ಪೆಕ್ಟರ್ ವಿಕ್ರಮ್’ ಮತ್ತು ‘ಗೋವಿಂದ ಗೋವಿಂದ’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.