ಬೆಂಗಳೂರು: ನನ್ನ ಬಳಿ ಮೂವರು ಪ್ರಭಾವಿ ವ್ಯಕ್ತಿಗಳ ಸಿಡಿ ಇದೆ ಎಂದು ಎಂದು ಸಾಮಾಜಿಕ ಕಾರ್ಯಕರ್ತ, ಜಾರಕಿಹೊಳಿ ಪ್ರಕರಣದ ದೂರುದಾರ ದಿನೇಶ್ ಕಲ್ಲಹಳ್ಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಜಾರಕಿಹೊಳಿ ರಾಜೀನಾಮೆ ನೀಡಿದ ಬಳಿಕ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾನು ಆರೋಪಿಸುತ್ತಿರುವ ಮೂವರ ಪೈಕಿ ಒಬ್ಬರು ಸಚಿವ ಸಂಪುಟದಲ್ಲಿದ್ದಾರೆ ಇಬ್ಬರು ಉನ್ನತ ಹುದ್ದೆಯಲ್ಲಿದ್ದಾರೆ. ನಾನು ಕಾನೂನು ತಜ್ಞರ ಜೊತೆಗೆ ಮಾತನಾಡಿ ಅವರ ಹೆಸರನ್ನು ಬಹಿರಂಗ ಪಡಿಸುತ್ತೇನೆ ಎಂದರು.
ಯಾವ ಪಕ್ಷ, ಯಾರು, ಅವರ ಹೆಸರು ಎಲ್ಲಾ ವಿಚಾರವನ್ನು ನಾನು ಹೇಳುತ್ತೇನೆ. ಸರ್ಕಾರದ ಉನ್ನತ ಹುದ್ದೆಯಲ್ಲಿ ಇರುವವರು ಇದ್ದಾರೆ. ಅವರ ಸಿಡಿಗಳು ಇದೆ ಎನ್ನುವುದನ್ನು ಮಾತ್ರ ನಾನು ಹೇಳಬಹುದು. ಯಾರು ಎಂಬುದನ್ನು ನಾನು ಹೇಳುತ್ತೇನೆ. ಸತ್ಯಾ ಸತ್ಯಾಸತೆಯನ್ನು ಪರಿಶಿಲನೆಯಾಗಬೇಕು. ತನಿಕೆಯಾಗಬೇಕು ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದಿದ್ದಾರೆ.
ಅಧಿಕಾರ ದುರ್ಬಳಕೆ ಮಾಡಿ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಿದ್ದ ಸರ್ಕಾರದ ಪ್ರಭಾವಿ ವ್ಯಕ್ತಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಾಗಿತ್ತು. ದೂರು ನೀಡಿದ ಬಳಿಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಪ್ರಭಾವಿ ನಾಯಕರ ವಿರುದ್ಧ ದೂರು ನೀಡುತ್ತಿದ್ದೇನೆ. ಸಂತ್ರಸ್ತೆಯ ಹೆಸರು ಬಹಿರಂಗ ಪಡಿಸುವುದಿಲ್ಲ. ಸಂತ್ರಸ್ತೆಗೆ ಬೆದರಿಕೆ ಇರುವ ಕಾರಣ ಮಹಿಳೆ ಬರುವುದಿಲ್ಲ ಎಂದು ತಿಳಿಸಿದ್ದರು.
ಸಿಡಿ ಬಹಿರಂಗವಾದ ನಂತರ ರಮೇಶ್ ಜಾರಕಿಹೊಳಿ ರಾಜಿನಾಮೆಯನ್ನು ನೀಡಿದ್ದಾರೆ. ರಾಜಿನಾಮೆಯನ್ನು ಖಂಡಿಸಿ ಜಾರಕಿಹೊಳಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕವನ್ನು ಮಾಡಿ ಗೋಕಾಕ್ ಬಂದ್ ಮಾಡಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.