ಶಿವಮೊಗ್ಗ: ನಮ್ಮ ತಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶೀಘ್ರ ಗುಣಮುಖರಾಗುತ್ತಾರೆ ಎಂದು ಪುತ್ರಿ ಅರುಣಾದೇವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆತಂಕ ಬೇಡ, ಆರೋಗ್ಯವಾಗಿದ್ದೇನೆ- ಆಸ್ಪತ್ರೆಯಿಂದ ಸಿಎಂ ವಿಡಿಯೋ ಸಂದೇಶ
ಶಿವಮೊಗ್ಗದ ಗೋಪಾಳ ಬಡಾವಣೆಯ ತಮ್ಮ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅರುಣಾದೇವಿ, ನನ್ನ ತಂದೆಯವರಾದ ಯಡಿಯೂರಪ್ಪ ಅವರಿಗೆ ಭಾನುವಾರ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕೊರೊನಾದಿಂದ ಬೇಗ ಗುಣಮುಖರಾಗಿ ರಾಜ್ಯವನ್ನು ಮುನ್ನಡೆಸಲಿದ್ದಾರೆ. ಯಾರೂ ಆತಂಕ ಪಡುವುದು ಬೇಡ ಎಂದು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ನನ್ನ ತಂದೆ ಅವರಿಗೆ ಮುಂಜಾನೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಆರೋಗ್ಯವಾಗಿದ್ದೇನೆ ಯಾರೂ ಆತಂಕ ಪಡುವುದು ಬೇಡ ಎಂದು ಅವರು ಸಹ ತಿಳಿಸಿದ್ದಾರೆ. ನಿನ್ನೆಯಿಂದಲೂ ಜನ ಕರೆ ಮಾಡಿ ತಂದೆಯವರ ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದರು.
ವಿರೋಧ ಪಕ್ಷದ ನಾಯಕರುಗಳು ಸಹ ಟ್ವೀಟ್, ಮೆಸೇಜ್ ಮೂಲಕ, ರಾಜ್ಯದಾದ್ಯಂತ ಕಾರ್ಯಕರ್ತರು ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಎಲ್ಲರ ಹಾರೈಕೆಯಿಂದಾಗಿ ಶೀಘ್ರ ಗುಣಮುಖರಾಗುತ್ತಾರೆ ಎಂದರು.
ಅಲ್ಲದೇ ನನ್ನ ಅಪ್ಪ ಯಡಿಯೂರಪ್ಪ ಅವರಿಗೆ ಯಾವುದೇ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಅವರು ಉತ್ತಮ ಆರೋಗ್ಯದೊಂದಿಗೆ ಇದ್ದವರು. ಹಾಗಾಗಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಅಷ್ಟೇ. ಶೀಘ್ರ ಗುಣಮುಖರಾಗಿ ಕೊರೊನಾ ಗೆದ್ದು ಬರಲಿದ್ದಾರೆ ಎಂದು ಸಿಎಂ ಪುತ್ರಿ ಅರುಣಾದೇವಿ ತಿಳಿಸಿದರು.