ನನ್ನ ಜೀವಿತಾವಧಿಯೊಳಗೆ ಹಾಸನದಲ್ಲಿ ವಿಮಾನ ನಿಲ್ದಾಣ ಆಗಲಿ: ಹೆಚ್.ಡಿ.ದೇವೇಗೌಡರು

Public TV
2 Min Read
DEVEGOWDA

– ಹಣೆಬರಹ ಚೆನ್ನಾಗಿದ್ರೆ ಬಿಎಸ್‍ವೈ ಮತ್ತೆ ಸಿಎಂ ಆಗಬಹುದು

ಹಾಸನ: ಯಡಿಯೂರಪ್ಪ ನಾಲ್ಕು ಸಲ ಮುಖ್ಯಮಂತ್ರಿಯಾದರೂ ಹಾಸನ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. 2023ರ ಬಳಿಕ ಯಾರನ್ನು ಸಿಎಂ ಮಾಡ್ತಾರೆ ಅನ್ನೋದು ಬಿಜೆಪಿಗೆ ಬಿಟ್ಟ ವಿಚಾರ. ಅವರಿಗೆ ಹಣೆಬರಹ ಇದ್ದರೆ ಇನ್ನೊಂದು ಬಾರಿ ಮುಖ್ಯಮಂತ್ರಿ ಆಗಲಿ ಎಂದು ಯಡಿಯೂರಪ್ಪ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

devegowda 2

ಹಾಸನದಲ್ಲಿ ಮಾತನಾಡಿದ ದೇವೇಗೌಡರು, ಶಿವಮೊಗ್ಗ ಅಭಿವೃದ್ಧಿ ಮಾಡಿರುವ ಕುರಿತು ನನಗೆ ಅಸೂಯೆ ಇಲ್ಲ. ನನ್ನ ಜಿಲ್ಲೆಯನ್ನು ಸ್ವಲ್ಪ ಗಮನಿಸಿ ಎಂದು ನಾಳೆ ಕೃಷ್ಣಾ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೇಳುತ್ತೇನೆ. 2023ರ ವರೆಗೆ ಅವರೇ ಸಿಎಂ ಆಗಿರುತ್ತಾರೆ, ಆಗಲಿ ಎಂದು ಮೊದಲೇ ಹೇಳಿದ್ದೇನೆ. ನಮ್ಮಿಂದ ಇದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸ್ಥಳೀಯ ಶಾಸಕರ ಯೋಜನೆಗೆ ನಾನು ವಿರೋಧಪಡಿಸುವುದಿಲ್ಲ. ಆದರೆ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಅಡ್ಡಗಾಲಾಗಿರುವುದು ಸರಿಯಲ್ಲ ಎಂದರು.

yadiyurappa

ನಾವು ಅಧಿಕಾರದಲ್ಲಿದ್ದಾಗ ಬೆಂಗಳೂರು ಸಿಟಿ ಅಷ್ಟೇ ಅಲ್ಲ ಎಲ್ಲಾ ಸಿಟಿಯನ್ನು ಸಮಾನಾಂತರವಾಗಿ ನೋಡಿದ್ದೇವೆ. ಹಾಸನ ವಿಮಾನ ನಿಲ್ದಾಣ ಕಾಮಗಾರಿ ಅಭಿವೃದ್ಧಿ ಮಾಡಲು ಹೊರಟು ಅದು ಹಾಗೇ ಉಳಿದಿದೆ. ಅದನ್ನು ಕೂಡ ಮುಂದಿನ ದಿನಗಳಲ್ಲಿ ಕಾಮಗಾರಿ ಮಾಡಲು ಅನುವು ಮಾಡಿಕೊಡಬೇಕು ಜೊತೆಗೆ ಬೇಲೂರಿನಿಂದ ಬಿಳಿಕೆರೆವರೆಗೆ ನಾಲ್ಕು ಪಥದ ರಸ್ತೆ ಕಾಮಗಾರಿ ಸೇರಿದಂತೆ ಕುಮಾರಸ್ವಾಮಿ-ಯಡಿಯೂರಪ್ಪ ಸರ್ಕಾರ ಇದ್ದಾಗ ಹಾಸನದಲ್ಲಿ ಐಐಟಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಅದು ಕೂಡ ಈಗ ಮರೀಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

H D Kumaraswamy DH 1552592402 0

ಈ ದೇಶದ ಪ್ರಧಾನಿಗಳು ಬಡವರೆಲ್ಲ ವಿಮಾನದಲ್ಲಿ ಓಡಾಡುವ ಪರಿಸ್ಥಿತಿಯನ್ನು ನಿರ್ಮಿಸುವುದಾಗಿ ತಿಳಿಸಿದ್ದರು. ಈಗಾಗಲೇ ಹಾಸನ ವಿಮಾನ ನಿಲ್ದಾಣಕ್ಕೆ 550 ಎಕರೆ ಭೂಮಿಯನ್ನು ವಶಕ್ಕೆ ಕೊಡಲಾಗಿದೆ. ಯಡಿಯೂರಪ್ಪನವರಿಗೆ ಗೌರವದಿಂದ ಕೇಳಿಕೊಳ್ಳುತ್ತೇನೆ, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಹಾಸನದಿಂದ ರಫ್ತು ಮಾಡುವ ಸಲುವಾಗಿಯೇ ಹೆಚ್ಚು ಒತ್ತುಕೊಟ್ಟು ಇಲ್ಲೊಂದು ವಿಮಾನನಿಲ್ದಾಣ ಆಗಬೇಕೆಂಬುದು ಆಸೆಯಿತ್ತು. ವೈಯಕ್ತಿಕವಾಗಿ ಏನು ಇಲ್ಲ ಆದರೆ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕಾಲದಲ್ಲಿ ಗಮನ ಕೊಡಿ ಎಂದು ಮನವಿ ಮಾಡಿಕೊಂಡರು.

hd revanna

ನನಗೆ ಇನ್ನೂ 4 ತಿಂಗಳು ಕಳೆದರೆ 88 ವರ್ಷ ಮುಗಿಯುತ್ತದೆ. ಯಡಿಯೂರಪ್ಪ ಅವರ ಅಧಿಕಾರ ಅವಧಿ ಮುಗಿಯುವುದರೊಳಗೆ ನನಗೆ 90 ವರ್ಷ ಆಗಲಿದೆ. ಆಗ ನನಗೆ ನಡೆಯಲು ಆಗುತ್ತದೊ ಗೊತ್ತಿಲ್ಲ. ಆದರೆ ನನ್ನ ಜೀವಿತ ಅವಧಿಯ ಕೊನೆಯ ಒಳಗೆ ಯಡಿಯೂರಪ್ಪನವರೇ, ವಿಮಾನನಿಲ್ದಾಣ ಓಪನ್ ಮಾಡಿ ಕೋಡಿ ಎಂದು ವಿನಂತಿಸಿದರು.

ಇದುವರೆಗೆ ನನ್ನ ಜಿಲ್ಲೆಗೆ ಅವರು ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಅವರೇ ಯೋಚನೆ ಮಾಡಲಿ. ನಾನು ಈ ಎಲ್ಲಾ ವಿಷಯ ಚರ್ಚೆ ಮಾಡಲು ಕೃಷ್ಣಗೆ ಹೋಗಿ ಮನವಿ ಮಾಡಿಕೊಳ್ಳುತ್ತೇನೆ. ನಾನು ಸೇಡಿನಿಂದ ಯಾವುದೇ ವಿಚಾರವನ್ನು ಮಾತನಾಡುವುದಿಲ್ಲ ಅಧಿಕಾರದಲ್ಲಿದ್ದವರನ್ನು ಕೇಳುವುದು ನಮ್ಮ ಧರ್ಮ ಈ ಬಗ್ಗೆ ಕುಮಾರಸ್ವಾಮಿ, ರೇವಣ್ಣ ಅವರೆಲ್ಲರೂ ಪತ್ರ ಬರೆದಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *