ಬೆಂಗಳೂರು: ನನಗೆ ಸರಿಯಾದ ಚಿಕಿತ್ಸೆ, ಊಟ ನೀಡಲಿಲ್ಲ ಎಂಬ ಯುವಕನೊಬ್ಬನ ಆರೋಪಕ್ಕೆ ಸಂಬಂಧಿಸಿದಂತೆ ನಗರದ ರಾಜೀವ್ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.
ಯುವಕ ದಿಲೀಪ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳಾಗಿವೆ. ಆತನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಯುವಕ ಮೇ 23ರ ಮಧ್ಯಾಹ್ನ 2 ಗಂಟೆಗೆ ಖಾಸಗಿ ಆಸ್ಪತ್ರೆಯಿಂದ ನಮ್ಮ ಆಸ್ಪತ್ರೆಗೆ ತೀವ್ರ ಉಸಿರಾಟದ ಸಮಸ್ಯೆ ಮತ್ತು ಜ್ವರ ಎಂದು ಬಂದಿದ್ದಾನೆ. ಆಗ ನಾವು ಆತನ ಪರೀಕ್ಷೆ ಮಾಡಿ ಸ್ವಾಬ್ ಪಡೆದು ಕೋವಿಡ್ ವಾರ್ಡ್ ಗೆ ದಾಖಲಿಸಿಕೊಂಡಿದ್ದೆವು. ಅಲ್ಲದೆ ಅದೇ ದಿನ ಸಂಜೆ 5 ಗಂಟೆ ಸುಮಾರಿಗೆ ಆತನಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
Advertisement
Advertisement
ಯುವಕ ಜಾರ್ಖಂಡ್ ಮೂಲದವನಾಗಿದ್ದು, ಆತನ ಕಡೆಯವರು ಯಾರೂ ಜೊತೆಯಲ್ಲಿ ಬಂದಿಲ್ಲ. ಆತ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ. ಇಸಿಜಿ, ಎಕ್ಸ್ ರೇ ಎಲ್ಲ ಮಾಡಿದ್ದು ಆತನ ಹೃದಯದಲ್ಲಿ ಹೋಲ್ ಇರೋದು ಕಂಡುಬಂದಿತ್ತು. ಕೊವೀಡ್ 19 ರಿಪೋರ್ಟ್ ಬರುವವವರೆಗೂ ಯುವಕನಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಿದ್ದೇವೆ ಎಂದಿದ್ದಾರೆ.
Advertisement
ಮೇ 25ಕ್ಕೆ ಕೊರೊನಾ ರಿಪೊರ್ಟ್ ನೆಗೆಟಿವ್ ಎಂದು ಬಂದಿದೆ. ಕೂಡಲೇ ಆತ ಕೆಲಸ ಮಾಡುತ್ತಿದ್ದ ಕಂಪನಿಯ ಮ್ಯಾನೇಜರ್ ಅವರನ್ನು ಕರಸಿ ಆತನಿಗೆ ಇರೋ ಸಮಸ್ಯೆ ಬಗ್ಗೆ ತಿಳಿಸಿ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದೇವೆ. ಸದ್ಯ ಜಯದೇವ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದ್ದಾರೆ.
Advertisement
ಮೇಜರ್ ಹಾರ್ಟ್ ಸರ್ಜರಿ ಮಾಡಬೇಕಾಗಿದೆ. ನಾವು ಆತನಿಗೆ ಉತ್ತಮ ರೀತಿಯಲ್ಲೇ ಚಿಕಿತ್ಸೆ ನೀಡಿದ್ದೇವೆ. ಆದರೂ ಯುವಕ ಸುಳ್ಳು ಆರೋಪ ಮಾಡಿದ್ದಾನೆ ಎಂದು ನಾಗರಾಜ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.
ಯುವಕನ ಆರೋಪವೇನು..?
ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯ ಕೊರೋನಾ ವಾರ್ಡಿನಲ್ಲಿ ಸರಿಯಾಗಿ ಆಹಾರ ಕೂಡ ನೀಡ್ತಿಲ್ಲ. ಕೊರೊನಾದಿಂದ ಅಲ್ಲ ಹಸಿವಿನಿಂದ ಸಾಯ್ತೀನಿ ಅನಿಸುತ್ತಿದೆ. ಇದರಿಂದ ಆತ್ಮಹತ್ಯೆ ಮಾಡ್ಕೊಳ್ಳೋದು ಉತ್ತಮ ಅಂತ ಅನಿಸ್ತಿದೆ ಎಂದು ಶಂಕಿತ ಸೋಂಕಿತ ಕಣ್ಣೀರಿಟ್ಟಿದ್ದನು. ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.
‘ನನ್ನ ಹೆಸರು ದಿಲೀಪ್ ಕುಮಾರ್. ನಿನ್ನೆ ನಾನು ಉಸಿರಾಟದ ತೊಂದರೆಯಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ಚೆಕಪ್ ಬಂದೆ. ಎಕ್ಸ್‍ರೇ, ರಕ್ತ ಪರೀಕ್ಷೆ, ಇಸಿಜಿ ಮಾಡಿಸಿ ಬಳಿಕ ಚಿಕಿತ್ಸೆ ನೀಡೋದಾಗಿ ಹೇಳಿದ್ರು. ಎಲ್ಲವನ್ನೂ ಮಾಡಿಸಿದೆ. ನಿನ್ನ ಜೊತೆ ಯಾರಾದ್ರೂ ಇದ್ದಾರಾ ಅಂತ ಕೇಳಿದ್ರು. ನಾನು ಬೆಂಗಳೂರಲ್ಲಿ ಒಬ್ಬನೇ ಇದ್ದೀನಿ, ನನಗೆ ಇಲ್ಲಿ ಏನೂ ಗೊತ್ತಿಲ್ಲ ಎಂದೆ. 2ಸಾವಿರ ಡೆಪಾಸಿಟ್ ಮಾಡಲು ಹೇಳಿದ್ರು. ಹಣ ಕಟ್ಟಿದೆ. ಕೊರೊನಾ ಟೆಸ್ಟ್ ಮಾಡಿಸಿ, ವಾರ್ಡ್‍ಗೆ ಶಿಫ್ಟ್ ಮಾಡಿದ್ರು. ಉಸಿರಾಟಕ್ಕೆ ಆಕ್ಸಿಜನ್ ಹಾಕಿದ್ರು. ಬಳಿಕ 12.30ಕ್ಕೆ ಊಟ ಕೊಟ್ಟರು. ಮತ್ತೆ ರಾತ್ರಿ ಊಟ ಸಿಗಲ್ಲ ಅಂದ್ರು. ರಾತ್ರಿ ಊಟ ಕೊಡ್ತಿದ್ದಾರೆ ಅಂತ ಎಲ್ಲರೂ ಹೋದ್ರು. ನಾನೂ ಹೋದೆ. ಪಾತ್ರೆ ಕೊಡಿ ಅಂದ್ರು. ನನ್ನ ಬಳಿ ಇಲ್ಲ ಎಂದೆ. ತಟ್ಟೆ ಇಲ್ಲ ಅಂದ್ರೆ ಊಟ ಕೊಡಲ್ಲ ಅಂದ್ರು. ನಾನು ಆತ್ಮಹತ್ಯೆ ಮಾಡಿಕೊಳ್ಳುವುದೇ ಉತ್ತಮ ಅನಿಸ್ತು. ದಯಮಾಡಿ ಉಸಿರಾಟದ ತೊಂದರೆ ಸರಿಯಾದ ಮೇಲೆ ನನ್ನನ್ನು ಊರಿಗೆ ಕಳುಹಿಸಿ’ ಎಂದು ಕಣ್ಣೀರು ಹಾಕಿದ್ದನು.