ಹಾಸನ: ನಾನು ಈ ಹಿಂದೆ ಕೊರೊನಾ ಪರೀಕ್ಷೆ ಮಾಡಿಸಿದ್ದಾಗ ನೆಗೆಟಿವ್ ಬಂದಿತ್ತು. ಈಗ ಪಾಸಿಟಿವ್ ಬಂದಿದೆ ಎಂದು ಬಂದಿದ್ದೀರಾ. ನಾನು ಆಸ್ಪತ್ರೆಗೆ ಬರಲ್ಲ ಎಂದು ನಡುರಸ್ತೆಯಲ್ಲೇ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಅವಾಂತರ ಸೃಷ್ಟಿಸಿದ್ದಾನೆ.
ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಘಟನೆ ನಡೆದಿದೆ. ಸೋಂಕಿತ ಜುಲೈ 24ರಂದು ಕೊರೊನಾ ಟೆಸ್ಟ್‍ಗೆ ಒಳಪಟ್ಟಿದ್ದು, ಇಂದು ಕೊರೊನಾ ಪಾಸಿಟಿವ್ ಎಂದು ವರದಿಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆ ಅರಕಲಗೂಡು ಪಟ್ಟಣದಲ್ಲಿ ಇದ್ದ ವ್ಯಕ್ತಿಯನ್ನು ಕೋವಿಡ್-19 ಆಸ್ಪತ್ರೆಗೆ ಕರೆತರಲು ಆರೋಗ್ಯ ಇಲಾಖೆಯ ಸಿಬ್ಬಂದಿ ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಬರಲು ನಿರಾಕರಿಸಿದ ವ್ಯಕ್ತಿ, ನನಗೆ ಯಾವುದೇ ಪಾಸಿಟಿವ್ ಬಂದಿಲ್ಲ. ನಾನು ಆಸ್ಪತ್ರೆಗೆ ಬರೋದೂ ಇಲ್ಲ. ಬೇಕಾದ್ರೆ ಕೇಸ್ ಹಾಕಿಕೊಳ್ಳಿ ಎಂದು ಅವಾಂತರ ಸೃಷ್ಟಿಸಿದ್ದಾನೆ.
ಸಾರ್ವಜನಿಕ ಸ್ಥಳದಲ್ಲಿ ಘಟನೆ ನಡೆದಿದ್ದು, ಜನರು ಕುತೂಹಲದಿಂದ ನಿಂತು ನೋಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಕೊರೊನಾ ಸೋಂಕಿತನ ಮನವೊಲಿಸಿ ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳದಲ್ಲಿ ನೆರೆದಿದ್ದ ಜನರನ್ನು ಸ್ಥಳದಿಂದ ತೆರಳುವಂತೆ ತಿಳಿಸಿ, ವ್ಯಕ್ತಿಯನ್ನು ಆಸ್ಪತ್ರೆಗೆ ಬರುವಂತೆ ಮನವಿ ಮಾಡಿದ್ದಾರೆ.