ಕಲಬುರಗಿ: ಸದ್ಯ ನನಗೆ ಪಕ್ಷ ಉಳಿಸಿಕೊಳ್ಳುವುದಷ್ಟೇ ಮುಖ್ಯ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ನಾನು ಲಘುವಾಗಿ ಮಾತನಾಡೋಕೆ ಹೋಗಲ್ಲ. ಪಕ್ಷ ಯಾರನ್ನ ಬೆಳೆಸಿದೆ, ಯಾರನ್ನ ಯಾವ ಪಕ್ಷ ಬೆಳೆಸಿದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಇದೀಗ ನನಗೆ ನನ್ನ ಪಕ್ಷ ಉಳಿಸಿಕೊಳ್ಳುವುದಷ್ಟೇ ಮುಖ್ಯ ಎಂದರು.
ಶಿರಾ ಉಪಚುನಾವಣೆ ಪ್ರವಾಸದ ವೇಳೆ ಪುತ್ರ ಹೆಚ್‍ಡಿಕೆಗೆ ಆರೋಗ್ಯ ಸರಿಯಿಲ್ಲ. ಅದಕ್ಕಾಗಿ ವೈದ್ಯರ ಸಲಹೆ ಮೇರೆಗೆ ಕುಮಾರಸ್ವಾಮಿ ರೆಸ್ಟ್‍ನಲ್ಲಿದ್ದಾರೆ. ರಾಜ್ಯದ ನಾಲ್ಕು ಪದವಿಧರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದೇವೆ. ಈಶಾನ್ಯ ಪದವಿಧರ ಕ್ಷೇತ್ರದ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕಾಗಿ ನಾನು ಕಲಬುರಗಿಗೆ ಬಂದಿದ್ದೇನೆ ಎಂದು ಹೇಳಿದರು.
ನಾಲ್ಕು ಕ್ಷೇತ್ರಗಳಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ಜನ ಬೆಂಬಲವಿದೆ. ಶಿರಾ ಮತ್ತು ಆರ್‍ಆರ್ ಕ್ಷೇತ್ರ ಉಪಚುನಾವಣೆಗಳಲ್ಲಿ ನಮ್ಮ ಪಕ್ಷ ಏಕಾಂಗಿಯೇ ಹೋರಾಟ ಮಾಡಲಿದೆ. ನಮ್ಮ ಬಗ್ಗೆ ಯಾರು ಲಘುವಾಗಿ ಮಾತಾಡಿದ್ರು ಚುನಾವಣೆ ನಂತರ ಉತ್ತರ ನೀಡಲಿದ್ದೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯನ ಎಲ್ಲಾ ಮಾತುಗಳನ್ನ ನಾನು ಕೇಳಿದ್ದೇನೆ. ನಾನು ಎಲ್ಲಾ ವಿಚಾರಗಳನ್ನ ಚುನಾವಣೆ ನಂತರ ಎಳೆಎಳೆಯಾಗಿ ಬಿಚ್ಚಿಡಲಿದ್ದೇನೆ ಎಂದು ಸಿದ್ದರಾನಯ್ಯಗೆ ತಿರುಗೇಟು ನಿಡಿದರು.