– ಚಿರು ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ, ಮೇಘನಾಗೆ ನೋವು ಕೊಡಬೇಡಿ
– ಡ್ರಗ್ಸ್ ದಾಸರು ತಂದೆಗೆ ಒಳ್ಳೆ ಮಗ, ಹೆಂಡ್ತಿಗೆ ಒಳ್ಳೆ ಗಂಡ ಆಗಿರಲ್ಲ
ಬೆಂಗಳೂರು: ಪಾರ್ಟಿಗೆ ಹೋದಾಗ ನನಗೂ ಅಪ್ರೋಚ್ ಮಾಡುವರು, ಆದರೆ ನಾನು ತೆಗೆದುಕೊಳ್ಳುತ್ತಿರಲಿಲ್ಲ. ಈಗ ಇಡೀ ಇಂಡಸ್ಟ್ರಿ ಡ್ರಗ್ಸ್ ಜಾಲದಲ್ಲಿ ಇದೆ ಅನ್ನೋದು ತಪ್ಪು ಎಂದು ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷ್ ಹೇಳಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ರಕ್ಷ್, ಕನ್ನಡ ಚಿತ್ರರಂಗಕ್ಕೆ ಉದಯ್‍ಕುಮಾರ್, ರಾಜ್‍ಕುಮಾರ್ ಸರ್ ಅಡಿಪಾಯ ಹಾಕಿಕೊಟ್ಟಿದ್ದಾರೆ. ಈಗ ಹಿರಿಯ ನಾಯಕರಾದ ಜಗದೀಶ್, ಶಿವಣ್ಣ ಸರ್ ಸೇರಿದಂತೆ ಅನೇಕರು ಆ ಸಂಸ್ಕಾರ ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ಹೀಗಾಗಿ ಯಾರೋ ಒಬ್ಬರು, ಇಬ್ಬರು ಮಾಡೋ ತಪ್ಪಿಗೆ ಇಡೀ ಸ್ಯಾಂಡಲ್‍ವುಡ್ ಪೂರ್ತಿ ಅನ್ನೋದು ತಪ್ಪು. ಇದನ್ನ ನಾನು ಒಪ್ಪಲ್ಲ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ಈ ಸಂದರ್ಭದಲ್ಲಿ ಇಡೀ ಸ್ಯಾಂಡಲ್‍ವುಡ್ ಒಂದಾಗಬೇಕು. ಈ ರೀತಿ ಆರೋಪ, ಪ್ರತ್ಯಾರೋಪ ಮಾಡೋದು ಸರಿಯಲ್ಲ ಎಂದರು.
ಡ್ರಗ್ಸ್ ಅನ್ನೋದು ಎಲ್ಲಾ ಕಡೆ ಇದೆ. ಕೆಲವು ಕಡೆ ಬೆಳಕಿಗೆ ಬರಲ್ಲ ಅಷ್ಟೆ. ಸ್ಯಾಂಡಲ್‍ವುಡ್ ಅಲ್ಲ, ರಾಜಕೀಯ ಮಕ್ಕಳು ಇರಬಹುದು. ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಮಕ್ಕಳು ಇರಬಹುದು, ಮಾಡಿರಬಹುದು. ಇಡೀ ಇಂಡಸ್ಟ್ರಿ ಜಾಲ ಅನ್ನೋದು ತಪ್ಪು. ನಾನು ಅನೇಕ ಹಿರಿಯ ಕಲಾವಿದರ ಜೊತೆ ಒಡನಾಟ ಹೊಂದಿದ್ದೇನೆ. ಅವರ ಮನೆಗೆ ಊಟಕ್ಕೆ ಹೋಗಿದ್ದೀನಿ. ಆದರೆ ಆ ರೀತಿಯ ಪದ್ಧತಿ ಸ್ಯಾಂಡಲ್‍ವುಡ್‍ನಲ್ಲಿ ಇಲ್ಲ ಎಂದು ರಕ್ಷ್ ಭರವಸೆಯಿಂದ ಹೇಳಿದರು.
ಡ್ರಗ್ಸ್ ದಾಸರು ಆಗಿರುವವರು ತಂದೆಗೆ ಒಳ್ಳೆಯ ಮಗ ಆಗಿರಲ್ಲ, ಹೆಂಡತಿಗೆ ಒಳ್ಳೆಯ ಗಂಡ ಆಗಿರಲ್ಲ. ಮಗುವಿಗೆ ಒಳ್ಳೆಯ ತಂದೆ ಆಗಲು ಸಾಧ್ಯವಿಲ್ಲ. ನನಗೂ ಪಾರ್ಟಿಗೆ ಹೋದಾಗ ಅಪ್ರೋಚ್ ಮಾಡುವರು. ಆದರೆ ನಾನು ತೆಗೆದುಕೊಳ್ಳುತ್ತಿರಲಿಲ್ಲ. ನಾನು ಕಣ್ಣಾರೆ ನೋಡಿದ್ದೇನೆ. ಆದರೆ ಎಲ್ಲರೂ ನೋಡಿದ್ದನ್ನು ಹೇಳುವುದಿಲ್ಲ. ಅವರು ಸ್ಯಾಂಡಲ್‍ವುಡ್‍ನವರು ಅಲ್ಲ, ಸ್ಯಾಂಡಲ್‍ವುಡ್ ಜೊತೆ ಸಂಬಂಧ ಇದ್ದವರು. ಆದರೆ ಇಡೀ ಇಂಡಸ್ಟ್ರಿ ಡ್ರಗ್ಸ್ ಜಾಲದಲ್ಲಿ ಇದೆ ಅನ್ನೋದು ತಪ್ಪು ಎಂದು ರಕ್ಷ್ ಹೇಳಿದರು.
ಇಂದ್ರಜಿತ್ ಲಂಕೇಶ್ ಅವರು ಯಾಕೆ ಈ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಮೇಘನಾ ಅವರು ಈಗ ಗರ್ಭಿಣಿ. ಅವರಿಗೆ ನೋವು ಕೊಡುವುದು ಬೇಡ. ಯಾಕೆ ಸುಮ್ಮನೆ ಅವರ ಮೇಲೆ ಆರೋಪ ಮಾಡುವುದು. ಚಿರು ನಾನು ಒಳ್ಳೆಯ ಸ್ನೇಹಿತರು. ರಿಯಾಲಿಟಿ ಶೋ, ಫುಡ್ ಫೆಸ್ಟಿವಲ್ ಈ ರೀತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀವಿ. ಪಾರ್ಟಿಯಲ್ಲಿ ಭಾಗವಹಿಸುತ್ತಾ ಇದ್ವಿ. ಚಿರಂಜೀವಿ ಸರ್ಜಾ ಯಾವತ್ತೂ ಡ್ರಗ್ಸ್ ಬಗ್ಗೆ ಮಾತನಾಡಿಲ್ಲ, ಅವರು ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಈ ರೀತಿಯಾ ಮಾತನಾಡುವುದು ತಪ್ಪು ಎಂದು ಇಂದ್ರಜಿತ್ ಹೇಳಿಕೆಗೆ ರಕ್ಷ್ ಪ್ರತಿಕ್ರಿಯಿಸಿದರು.
ನನ್ನ ಜೀವನದಲ್ಲಿ ರೇವ್ ಪಾರ್ಟಿ ನೋಡಿಲ್ಲ. ನಾನು ಇದುವರೆಗೂ ರೇವ್ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಗೆಟ್ ಟುಗೆದರ್ ಪಾರ್ಟಿಯಲ್ಲಿ ಭಾಗವಹಿಸುತ್ತಾ ಇದ್ದೀವಿ. ಆದರೆ ಈ ರೀತಿ ಡ್ರಗ್ಸ್ ಪಾರ್ಟಿಗೆ ಹೋಗಿಲ್ಲ. ದೊಡ್ಡ ದೊಡ್ಡ ನಟರು ಕೂಡ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಯಾರು ಈ ರೀತಿ ಡ್ರಗ್ಸ್ ದಾಸರು ಯಾರೂ ಆಗಿರಲಿಲ್ಲ. ಸ್ಯಾಂಡಲ್‍ವುಡ್‍ನಲ್ಲಿ ಇದಕ್ಕೆಲ್ಲಾ ಜಾಗ ಎಲ್ಲಿದೆ ಎಂದು ರಕ್ಷ್ ಪ್ರಶ್ನಿಸಿದರು.
ಎನ್‍ಸಿಬಿ ಅವರು ಲಿಸ್ಟ್ ಇದೆ ಎಂದು ಹೇಳಿದ್ದಾರೆ. ಮೊದಲು ಲಿಸ್ಟ್ ಬಿಡುಗಡೆ ಮಾಡಲಿ. ಯಾರ‍್ಯಾರ ಹೆಸರು ಇದೆಯೋ ಅವರಿಗೆ ಶಿಕ್ಷೆ ಆಗಲಿ. ಯಾರ‍್ಯಾರ ಹೆಸರು ಬರುತ್ತೋ ಕಾದು ನೋಡಬೇಕು ಎಂದಿದ್ದಾರೆ.