ನಡ್ಡಾ, ಸಿ.ಟಿ.ರವಿ ಸಮ್ಮುಖದಲ್ಲಿ ಬಿಜೆಪಿ ಸೇರಿದ ಖುಷ್ಬೂ

Public TV
2 Min Read
khushbu ct ravi

ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳು ಆರಂಭವಾಗಿದ್ದು, ಕಾಂಗ್ರೆಸ್‍ಗೆ ಗುಡ್ ಬೈ ಹೇಳಿದ್ದ ನಟಿ ಖುಷ್ಬೂ ಸುಂದರ್ ಇದೀಗ ಬಿಜೆಪಿ ಸೇರಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ,ನಡ್ಡಾ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

khushbu sundar

ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್.ಮುರುಗನ್ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಿಜೆಪಿ ಶಾಲು ಹೊದಿಸಿ, ಹೂ ಗುಚ್ಛ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.

ಇತ್ತೀಚೆಗೆ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಇಂದು ಎಐಸಿಸಿ ವಕ್ತಾರೆ ಸ್ಥಾನದಿಂದ ಕಾಂಗ್ರೆಸ್ ಅವರನ್ನು ವಜಾಗೊಳಿಸಿತ್ತು. ಇದೀಗ ಅವರು ದೆಹಲಿಯ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷದ ಪ್ರಮುಖರು ಬಿಜೆಪಿ ಶಾಲು ಹೊದಿಸಿ ಬರಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದ ಖುಷ್ಬೂ ಸುಂದರ್, ಪಕ್ಷದ ಕೆಲವು ವಿಷಯಗಳು ಉನ್ನತ ಮಟ್ಟದಲ್ಲಿಯೇ ಉಳಿದುಕೊಂಡಿವೆ. ಆ ವಿಷಯ ಅಥವಾ ವಿಚಾರ ತಳಮಟ್ಟದಲ್ಲಿರುವ ಕಾರ್ಯಕರ್ತರಿಗೆ ತಲುಪುತ್ತಿಲ್ಲ. ಉನ್ನತ ಸ್ಥಾನದಲ್ಲಿದ್ದವರಿಂದ ಕೇವಲ ಆದೇಶಗಳು ಬರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆಗೆ ಕಾರಣ ತಿಳಿಸಿದ್ದರು.

Sundar

ಖುಷ್ಬೂ ಸುಂದರ್ 2014ರಲ್ಲಿ ಡಿಎಂಕೆ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ತದನಂತರ ತಮಿಳುನಾಡಿನ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಪಕ್ಷದ ವಕ್ತಾರೆಯಾಗಿ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜಕೀಯ ಅಂಗಳದಲ್ಲಿ ಚಿರಪರಿಚಿತರಾಗಿದ್ದರು. ಕನ್ನಡ, ಹಿಂದಿ, ತಮಿಳು ಸೇರಿದಂತೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಖುಷ್ಬೂ ದಕ್ಷಿಣ ಭಾರತದಲ್ಲಿ ಚಿರಪರಿಚಿತರು.

ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ಕಾಂಗ್ರೆಸ್‌ ವಿರೋಧಿಸಿದ್ದರೆ ಖುಷ್ಬು ಸುಂದರ್‌ ಬಹಿರಂಗವಾಗಿಯೇ ಸಮರ್ಥಿಸಿಕೊಂಡಿದ್ದರು. ನೂತನ ಶಿಕ್ಷಣ ಕುರಿತಾಗಿ ಪ್ರಧಾನಿ ಮೋದಿಯನ್ನು ಪ್ರಶಂಸಿಸಿ ಎನ್‌ಇಪಿ ಕುರಿತಾಗಿ ಪಕ್ಷದ ವಿರೋಧಿ ನಿಲುವು ಅನುಸರಿಸಿದ್ದಕ್ಕಾಗಿ ರಾಹುಲ್‌ ಗಾಂಧಿ ಅವರಲ್ಲಿ ಕ್ಷಮೆ ಕೋರಿದ್ದರು.

Share This Article