– ಹಣ ಹಾಕಿದ ಅರ್ಧ ಗಂಟೆಯಲ್ಲೇ 32 ಲಕ್ಷ ಎಗರಿಸಿದ್ರು
ಬೆಂಗಳೂರು: ನಡೆಯೋ ಸ್ಟೈಲ್ ಮತ್ತು ಗಡ್ಡ ನೋಡಿ ಇಬ್ಬರು ಎಟಿಎಂ ಕಳ್ಳರನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.
ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದ ಕಸ್ಟೋಡಿಯನ್ ಸೇರಿದಂತೆ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಹಾಗೂ ಅಶ್ವತ್ ಬಂಧಿತ ಆರೋಪಿಗಳು. ಗೌರಿಬಿದನೂರಿನ ಮೂಲದ ಕಿರಣ್ ಸಿಎಂಎಸ್ ಇನ್ ಫೋ ಸಿಸ್ಟಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯಿಂದ ಹಣ ಪಡೆದುಕೊಂಡು ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದನು.
ಆರೋಪಿ ಕಿರಣ್ ಐಟಿಪಿಎಲ್ ರೋಡ್ ಹಾಗೂ ಹಲಸೂರು ಮಾರ್ಗದ ಎಟಿಎಂಗಳಲ್ಲಿ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದನು. ಇತ್ತೀಚೆಗೆ ಕಂಪನಿ ಕಿರಣ್ ಹೋಗುವ ಮಾರ್ಗಕ್ಕೆ ಬೇರೊಬ್ಬರನ್ನು ನಿಯೋಜನೆ ಮಾಡಿತ್ತು. ಇದೇ ತಿಂಗಳು ಕಸ್ಟೋಡಿಯನ್ ಆಗಿದ್ದ ಸೂರ್ಯ ಹಲಸೂರಿನ ಎರಡು ಬ್ಯಾಂಕ್‍ನ ಎಟಿಎಂಗಳಿಗೆ ಹಣ ತುಂಬಿಸಿದ್ದರು. ಹಣ ಹಾಕಿದ ಅರ್ಧ ಗಂಟೆಯಲ್ಲೇ ಆರೋಪಿ ಕಿರಣ್ ಎಟಿಎಂಗಳಿಗೆ ಹೋಗಿ 32,28,500 ಲಕ್ಷ ಹಣ ಎಗರಿಸಿದ್ದನು.
ಕಿರಣ್ ಎಟಿಎಂಗಳ ಪಾಸ್ ವರ್ಡ್ ತಿಳಿದುಕೊಂಡಿದ್ದನು. ಹೀಗಾಗಿ ಹಣ ಕಳ್ಳತನ ಮಾಡಿದ್ದನು. ಕೃತ್ಯಕ್ಕೆ ಮತ್ತೊಬ್ಬ ಆರೋಪಿ ಅಶ್ವತ್ ಕೈ ಜೋಡಿಸಿದ್ದ. ಹಣ ಕಳವು ಸಂಬಂಧ ಕಂಪನಿಯು ಹಲಸೂರು ಠಾಣೆಗೆ ದೂರು ನೀಡಿತ್ತು. ಸಿಸಿಟಿವಿ ಸೆರೆಯಾದ ದೃಶ್ಯಾವಳಿ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಣ ಕದ್ದು ಯಾರಿಗೂ ಅನುಮಾನ ಬಾರದಂತೆ ನಟಿಸಿದ್ದರು. ಅಲ್ಲದೇ ಪೊಲೀಸ್ ವಿಚಾರಣೆಯಲ್ಲಿ ಕೃತ್ಯದ ಬಗ್ಗೆ ಗೊತ್ತಿಲ್ಲ ಎಂದಿದ್ದರು.
ಕೊನೆಗೆ ಪೊಲೀಸರು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಆರೋಪಿಯ ನಡೆಯುವ ಸ್ಟೈಲ್, ಗಡ್ಡ ಹಾಗೂ ಕಿರಣ್ ನಡೆಯುವ ಸ್ಟೈಲ್‍ಗೆ ಹೋಲಿಕೆ ಮಾಡಿದ್ದರು. ಅನುಮಾನದಿಂದ ತೀವ್ರ ವಿಚಾರಣೆಗೊಳಪಡಿಸಿದಾಗ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಬಂಧಿತರಿಂದ 24.10 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಹಲಸೂರು ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.