ಮಂಡ್ಯ: ಸ್ನೇಹಿತರೊಂದಿಗೆ ರಸ್ತೆ ಬದಿಯಲ್ಲಿ ನಿಂತು ಮಾತನಾಡುವ ವೇಳೆ ದುಷ್ಕರ್ಮಿಗಳು ಡ್ರಾಗರ್‌ನಿಂದ ಚುಚ್ಚಿ ವ್ಯಕ್ತಿಯ ಮೈ ಮೇಲೆ ಇದ್ದ ಚಿನ್ನಾಭರಣವನ್ನು ದೋಚಿಕೊಂಡು ಹೋಗಿರುವ ಘಟನೆ ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ದಳವಾಯಿಕೋಡಿಹಳ್ಳಿ ಗ್ರಾಮದ ಮಧು (30) ರಸ್ತೆ ಬದಿಯಲ್ಲಿ ನಿಂತುಕೊಂಡು ತನ್ನ ಸ್ನೇಹಿತರೊಂದಿಗೆ ಮಾತನಾಡುವ ವೇಳೆ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಡ್ರಾಗರ್ ನಲ್ಲಿ ಹೊಟ್ಟೆಯ ಭಾಗಕ್ಕೆ ಚುಚ್ಚಿದ್ದಾರೆ. ಇದನ್ನು ಕಂಡ ಸ್ನೇಹಿತರು ಸಹ ಭಯದಿಂದ ಹಿಂದೆ ಸರಿದಿದ್ದಾರೆ. ದುಷ್ಕರ್ಮಿಗಳು ಮಧುವಿಗೆ ಚುಚ್ಚಿದ ಬಳಿಕ ಅವರ ಮೈ ಮೇಲೆ ಇದ್ದ ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ನಂತರ ರಕ್ತದ ಮಡುವಿನಲ್ಲಿ ಬಿದ್ದು ಹೊದ್ದಾಡುತ್ತಿದ್ದ ಮಧುವನ್ನು ಮಳವಳ್ಳಿಯ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯದಲ್ಲಿ ಮಧು ಸಾವನ್ನಪ್ಪಿದ್ದಾರೆ.
ಈ ಪ್ರಕರಣವನ್ನು ಮೇಲ್ನೊಟಕ್ಕೆ ಚಿನ್ನಾಭರಣವನ್ನು ದೋಚುವ ಸಲುವಾಗಿ ದುಷ್ಕರ್ಮಿಗಳು ನಡೆಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ದುಷ್ಕರ್ಮಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.