– ಮುಂಬೈ, ದೆಹಲಿಯಂತಾಯಿತು ಬೆಂಗಳೂರು
– ಉಳಿದ ರೋಗಗಳಿಗೂ ಸಿಗುತ್ತಿಲ್ಲ ಚಿಕಿತ್ಸೆ
ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಗಮನಿಸಿ ನಿಮ್ಮ ಪ್ರಾಣಕ್ಕೆ ನೀವೇ ಗತಿ. ಸರ್ಕಾರವೂ ಬರುವುದಿಲ್ಲ. ಆಸ್ಪತ್ರೆಗಳು ಬರುವುದಿಲ್ಲ. ಕೇವಲ ಕೊರೊನಾ ಮಾತ್ರ ಅಲ್ಲ. ಉಳಿದ ರೋಗಗಳಿಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದು ದುಸ್ತರವಾಗಿ ಬಿಟ್ಟಿದೆ.
ಕೊರೊನಾ ತಾಂಡವಕ್ಕೆ ಬ್ರೇಕ್ ಹಾಕಲು ನಮ್ಮನಾಳುವ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಚಿಕಿತ್ಸೆ ಸಿಗದೇ ರಾಜಧಾನಿಯಲ್ಲಿ ಸಾವಪ್ಪುವವರ ಸಂಖ್ಯೆ ದಿನಕಳೆದಂತೆ ಹೆಚ್ಚಾಗ್ತಿದೆ. ಚೀನಾ, ಇಟಲಿ, ದೆಹಲಿ, ಮುಂಬೈನಲ್ಲಿ ಕಂಡು ಬರುತ್ತಿದ್ದ ಭೀಕರ ದೃಶ್ಯಗಳು ನಮ್ಮ ಬೆಂಗಳೂರಿನಲ್ಲಿಯೂ ಕಂಡು ಬರಲು ಶುರುವಾಗಿವೆ.
Advertisement
Advertisement
ಸೋಂಕಿತರೊಬ್ಬರು ನಡುರಸ್ತೆಯಲ್ಲೇ ಕುಸಿದುಬಿದ್ದು ಸಾವನ್ನಪ್ಪುವ ಪ್ರಕರಣವೊಂದು ಇಂದು ಬೆಳಕಿಗೆ ಬಂದಿದೆ. ಇಂದು ಒಂದೇ ದಿನ ಬೆಂಗಳೂರಿನಲ್ಲಿ ಬರೋಬ್ಬರಿ 8 ಮಂದಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.
Advertisement
ಆಸ್ಪತ್ರೆಯಲ್ಲಿ ಬೆಡ್ ಇಲ್ಲ. ಫುಲ್ ಆಗಿದೆ. ಅಡ್ಮಿಟ್ ಮಾಡಿಕೊಳ್ಳಲ್ಲ ಎನ್ನುವುದು ಬಹುತೇಕ ಪ್ರಕರಣಗಳಲ್ಲಿ ಕೇಳಿಬಂದ ಮಾತು. ರೋಗಿಗಳು ದಿನಗಟ್ಟಲೇ ಆಸ್ಪತ್ರೆಗಳಿಗೆ ಅಲೆದು ಅಲೆದು ಸುಸ್ತಾಗಿ ರಸ್ತೆಗಳಲ್ಲಿ, ಮನೆಗಳಲ್ಲಿ ಜೀವ ಬಿಡುತ್ತಿದ್ದಾರೆ. ಒಂದೊಂದು ಕಥನ ಮನಕಲಕುತ್ತದೆ.
Advertisement
ರಸ್ತೆ ಪಕ್ಕ ಸೋಂಕಿತನ ಶವ:
ಹನುಮಂತನಗರದಲ್ಲಿ ಸೋಂಕಿತನೊಬ್ಬ ನಡುರಸ್ತೆಯಲ್ಲಿ ಕುಸಿದುಬಿದ್ದು ನರಳಾಡಿ ಸಾವನ್ನಪ್ಪಿದ್ದಾರೆ. ಇಂದು ಸಂಜೆ ಐದು ಗಂಟೆಗೆ ಘಟನೆ ನಡೆದಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಘಟನೆ ನಡೆದು ನಾಲ್ಕು ಗಂಟೆಯಾದರೂ ಸ್ಥಳಕ್ಕೆ ಅಂಬುಲೆನ್ಸ್ ಹೋಗಿಲ್ಲ. ಹೆಣ ರಸ್ತೆಯಲ್ಲಿ ಬಿದ್ದಿದ್ದರೂ ಹೇಳುವವರು, ಕೇಳುವವರು ಯಾರು ಇಲ್ವಾ ಅಂತಾ ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮನೆಯಲ್ಲೇ ಬಾಧಿತನ ಮರಣ:
ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಕಾರಣ ಚಿಕಿತ್ಸೆ ಸಿಗದೇ ಕೊರೊನಾ ಸೋಂಕಿತ 61 ವರ್ಷದ ವ್ಯಕ್ತಿಯೊಬ್ಬರು ಮನೆಯಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆದಿದೆ. ಕಿಡ್ನಿ ಸಮಸ್ಯೆಯಿಂದ ಬಳಲ್ತಿದ್ದ ಈ ವ್ಯಕ್ತಿ ರಂಗದೊರೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.
ಈ ವೇಳೆ ಸ್ವಾಬ್ ಟೆಸ್ಟ್ ಮಾಡಲಾಗಿತ್ತು. ಆದ್ರೆ ಸದ್ಯಕ್ಕೆ ಬೆಡ್ ಇಲ್ಲ ಅಂತಾ ವಾಪಸ್ ಕಳಿಸಿದ್ರು. ಪಾಸಿಟವ್ ರಿಪೋರ್ಟ್ ಬಂದ ನಂತ್ರ ಬಿಬಿಎಂಪಿ ಆರೋಗ್ಯ ಇಲಾಖೆಗೆ ತಿಳಿಸಿದ್ರೂ, ಆಸ್ಪತ್ರೆಗೆ ಶಿಫ್ಟ್ ಮಾಡಲು ಬರಲೇ ಇಲ್ಲ. ಕೊನೆಗೆ ನರಳಿ ನರಳಿ ಸೋಂಕಿತ ವ್ಯಕ್ತಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ವಿಪರ್ಯಾಸ ಎಂದರೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಬನ್ನಿ ಎಂದರೂ ಯಾರು ಬಂದಿಲ್ಲ. ಕೊನೆಗೆ ಅಕ್ಕ ಪಕ್ಕದ ಮನೆಯವರೇ ಪಿಪಿಇ ಕಿಟ್ ಧರಿಸಿಕೊಂಡು ಹೋಗಿ, ಶವಕ್ಕೆ ಪಿಪಿಇ ಕಿಟ್ ಹಾಕಿದ್ದಾರೆ.
ಬೆಡ್ ಸಿಗದೇ ಮಹಿಳೆ ಬಲಿ:
ತುರ್ತು ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಮಹಿಳೆ ಬಲಿಯಾದ ಘಟನೆ ಬೆಂಗಳೂರು ಹೊರವಲಯದ ಹೊಸಕೋಟೆಯ ಸಮೇತನಹಳ್ಳಿಯಲ್ಲಿ ನಡೆದಿದೆ. ಕಳೆದ ಬುಧವಾರ ಮನೆಗೆ ತೆರಳ್ತಿದ್ದಾಗ ಕುಸಿದುಬಿದ್ದಿದ್ದ ಮಹಿಳೆಗೆ ಚಿಕಿತ್ಸೆ ಕೊಡಿಸಲು ಹಲವು ಖಾಸಗಿ ಆಸ್ಪತ್ರೆಗಳಿಗೆ ಎಡತಾಕಿದ್ರೂ ಚಿಕಿತ್ಸೆ ಸಿಕ್ಕಿರಲಿಲ್ಲ. ಕೊನೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೆದುಳಿಗೆ ಪೆಟ್ಟಾದ ಕಾರಣ ಐಸಿಯು ಇರುವ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಹೇಳಿದ್ರು. ಕಳೆದ ರಾತ್ರಿಯಿಂದ ಹತ್ತಾರು ಆಸ್ಪತ್ರೆಗೆ ಕರೆ ಮಾಡಿದ್ರೆ ಬಹುತೇಕ ಕಡೆ ಐಸಿಯು ಖಾಲಿ ಇಲ್ಲ ಎಂಬ ಉತ್ತರ ಬಂತು. ಕೆಲ ಆಸ್ಪತ್ರೆಗಳು ಕೊರೊನಾ ರಿಪೋರ್ಟ್ ತಂದ್ರೆ ಮಾತ್ರ ಟ್ರೀಟ್‍ಮೆಂಟ್ ಅಂದ್ರು. ಕೊರೋನಾ ರಿಪೋರ್ಟ್ ಸಿಗದ ಕಾರಣ ಮನೆಯಲ್ಲಿಯೇ ನರಳಿ ನರಳಿ ಮಹಿಳೆ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗಳಿಗೆ ದಾಖಲಿಸಿಕೊಳ್ಳದ ಆಸ್ಪತ್ರೆಗಳ ವಿರುದ್ಧ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.
ಚಿಕಿತ್ಸೆ ಸಿಗದೇ ನಿವೃತ್ತ ಎಸ್‍ಐ ಸಾವು:
ಜ್ವರ ಮತ್ತು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಿವೃತ್ತ ಎಸ್‍ಐ ಒಬ್ಬರು, ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಕಾರಣ ಚಿಕಿತ್ಸೆ ಸಿಗದೇ ಮನೆಯಲ್ಲಿಯೇ ಸಾವನ್ನಪ್ಪಿದ ಘಟನೆ ಕೋರಮಂಗಲದಲ್ಲಿ ನಡೆದಿದೆ. ಮೊದಲು ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಎಸ್‍ಐ, ವಿಲ್ಸನ್ ಗಾರ್ಡನ್‍ನ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದರು. ಆದರೆ ರಿಪೋರ್ಟ್ ಬರುವುದು ತಡವಾಯ್ತು. ಉಸಿರಾಟದ ತೊಂದ್ರೆ ತೀವ್ರವಾಯ್ತು. ರಾಜೀವ್ ಗಾಂಧಿ ಆಸ್ಪತ್ರೆಗೆ ಹೋದ್ರೆ ಮೂರು ಗಂಟೆಗಳ ಕಾಯಿಸಿ ಬೆಡ್ ಇಲ್ಲ ಅಂತಾ ಹೇಳಿ ವಾಪಸ್ ಕಳುಹಿಸಿದ್ದಾರೆ. ಬೇರೆ ದಾರಿಯಿಲ್ಲದೇ ಮನೆಗೆ ಬಂದ ನಿವೃತ್ತ ಎಸ್‍ಐ, ಇಂದು ಅಸುನೀಗಿದ್ದಾರೆ.
ಚಿಕಿತ್ಸೆಗೆ ಅಲೆದಲೆದು ಸಾವನ್ನಪ್ಪಿದ್ರು:
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬೆಂಗಳೂರಿನ ಗೊಲ್ಲಹಟ್ಟಿಯ ವ್ಯಕ್ತಿ ಚಿಕಿತ್ಸೆ ಕೊಡಿ ಸ್ವಾಮಿ ಅಂತಾ ಆರೇಳು ಆಸ್ಪತ್ರೆಗಳಿಗೆ ಅಲೆದಾಡಿದ್ರು. ಆದರೆ ಸರ್ಕಾರಿ ಆಸ್ಪತ್ರೆ ಸೇರಿದಂತೆ ಎಲ್ಲಾ ಆಸ್ಪತ್ರೆಗಳು ಬೆಡ್ ಇಲ್ಲ ಎಂಬ ನೆಪ ಹೇಳಿ ಅಡ್ಮಿಟ್ ಮಾಡಿಕೊಂಡಿರಲಿಲ್ಲ. ಕೊನೆಗೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಚಿಕಿತ್ಸೆ ವಿಳಂಬವಾಗಿ ಇವರು ಕೂಡ ಸಾವನ್ನಪ್ಪಿದ್ದಾರೆ. ಇವರಿಗೆ 10 ತಿಂಗಳ ಹಸುಗೂಸಿದೆ.