ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮರಿ ಟೈಗರ್, ನಟ ವಿನೋದ್ ಪ್ರಭಾಕರ್ ಅವರನ್ನು ಇಂದು ಆರ್.ಆರ್ ನಗರದ ಮನೆಯಲ್ಲಿ ಭೇಟಿ ಮಾಡಿದರು.
ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ವಿನೋದ್ ಪ್ರಭಾಕರ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು, ಎಲೆಕ್ಷನ್ ಪ್ರಚಾರಕ್ಕೆ ಬರುವಂತೆ ಅವರಿಗೆ ಡಿಕೆಶಿ ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲೂ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನಲಾಗಿದೆ.
Advertisement
Advertisement
ಡಿಕೆ ಶಿವಕುಮಾರ್ ಅವರ ಆಹ್ವಾನದ ಮೇರೆಗೆ ವಿನೋದ್ ಪ್ರಭಾಕರ್ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ವಿನೋದ್ ಪ್ರಭಾಕರ್ ಜೊತೆ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಮಾತುಕತೆ ನಡೆಸಿದ ಡಿಕೆ ಶಿವಕುಮಾರ್ ಅವರು ಬಳಿಕ ಭೋಜನ ಸವಿದರು.
Advertisement
Advertisement
ಇತ್ತ ಆರ್.ಆರ್ ನಗರ ಮತ್ತು ಶಿರಾ ಬೈ ಎಲೆಕ್ಷನ್ ರಾಜಕೀಯ ತೀವ್ರ ಸ್ವರೂಪ ಪಡೆದುಕೊಂಡಿದೆ. ಆರ್.ಆರ್ ನಗರದಲ್ಲಿ ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದ್ದು, ಪ್ಯಾರಾ ಮಿಲಿಟರಿ ಪಡೆಯ ಅಗತ್ಯವಿದೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದರು. ಇದರ ಬೆನ್ನಲ್ಲೇ ಇಂದು ಆರ್.ಆರ್ ನಗರಕ್ಕೆ ಪ್ಯಾರಾ ಮಿಲಿಟರಿ ತುಕಡಿ ಆಗಮಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರು, ಕ್ಷೇತ್ರದಲ್ಲಿ ಅಂತಹ ಯಾವುದೇ ಘಟನೆ ನಡೆಯಲು ಅವಕಾಶವಿಲ್ಲ. ಶಾಂತಿಯುತವಾಗಿ ಚುನಾವಣೆ ನಡೆಯಲಿದೆ. ಈಗ ಮಿಲಿಟರಿ ಪಡೆಯೂ ಬಂದಿರುವುದರಿಂದ ಮತ್ತಷ್ಟು ಶಾಂತಿಯಿಂದ ಚುನಾವಣೆ ನಡೆಯಲಿದೆ ಎಂದರು.