ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಗೆ ವೇಗ ನೀಡಿರುವ ಸಿಸಿಬಿ ಪೊಲೀಸರು, ಮತ್ತೊಮ್ಮೆ ನಟ ದಿಗಂತ್ ಅವರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಈಗಾಗಲೇ ಒಂದು ಬಾರಿ ಸಿಸಿಬಿ ಎದುರು ಹಾಜರಾಗಿದ್ದ ದಿಗಂತ್, ಐಂದ್ರಿತಾ ದಂಪತಿ ಮತ್ತೆ ಸಿಸಿಬಿ ವಿಚಾರಣೆಗೆ ಕರೆದರೆ ಹಾಜರಾಗುತ್ತೇವೆ ಎಂದು ಹೇಳಿದ್ದರು. ಮೊದಲ ವಿಚಾರಣೆ ನಡೆದ 6 ದಿನಗಳ ಬಳಿಕ ದಿಗಂತ್ ಮತ್ತೆ ನೋಟಿಸ್ ನೀಡಲಾಗಿದೆ. ಇಂದು 11 ಗಂಟೆಗೆ ಕಚೇರಿಗೆ ಆಗಮಿಸುವಂತೆ ದಿಗಂತ್ ಅವರಿಗೆ ಮಾತ್ರ ನೋಟಿಸ್ ತಲುಪಿದೆ ಎಂಬ ಮಾಹಿತಿ ಲಭಿಸಿದೆ. ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಅವರ ಎದುರು ದಿಗಂತ್ ವಿಚಾರಣೆಗೆ ಹಾಜರಾಗಬೇಕಿದೆ.
ನಿನ್ನೆಯೇ ವಾಟ್ಸಾಪ್ ಮೂಲಕ ನಟ ದಿಗಂತ್ ಅವರಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆ ದಿಗಂತ್ ಮತ್ತು ಐಂದ್ರಿತಾ ರೇ ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಸಿಸಿಬಿ ಅಧಿಕಾರಿಗಳು 4 ರಿಂದ 5 ಗಂಟೆ ವಿಚಾರಣೆ ನಡೆಸಿದ್ದರು. ಆ ಬಳಿಕ ಇಬ್ಬರ ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದಿದ್ದರು.
ಸದ್ಯ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಫೋನ್‍ನಲ್ಲಿದ್ದ ಮಾಹಿತಿಯನ್ನು ಸಿಸಿಬಿ ಪೊಲೀಸರು ರೀಟ್ರೀವ್ ಮಾಡಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯನ್ನ ಆಧರಿಸಿ ಪೊಲೀಸರು ಸದ್ಯ ಮತ್ತೊಮ್ಮೆ ವಿಚಾರಣೆ ನಡೆಸಲು ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ವಿಚಾರಣೆ ಅಂತ್ಯವಾದಾಗ ಈ ಸಾಕ್ಷಿಗಳೇ ಸ್ಟಾರ್ ದಂಪತಿಗೆ ಮುಳುವಾಗ ಬಹುದು ಎನ್ನಲಾಗಿದ್ದು, ಸದ್ಯ ದಿಗಂತ್ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.