ಚೆನ್ನೈ: ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯಿಂದ ನಿವೃತ್ತಿ ಪಡೆಯಲಿದ್ದಾರೆ ಎಂಬ ಸುದ್ದಿಯೊಂದು ಇದೀಗ ಹರಿದಾಡುತ್ತಿದೆ.
ನಟ ರಜನಿಕಾಂತ್ ಇತ್ತೀಚೆಗೆ ಅಣ್ಣಾತೆ ಸಿನಿಮಾದ ಚಿತ್ರೀಕರಣ ಮುಗಿಸಿ ಹೈದರಾಬಾದ್‍ನಿಂದ ಚೆನ್ನೈಗೆ ಬಂದು ವ್ಯಾಕ್ಸಿನ್ ಎರಡನೇ ಡೋಸ್ ಪಡೆದು ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆದು ಕಾಲ ಕಳೆಯುತ್ತಿದ್ದಾರೆ.
ಇಲ್ಲಿಯವರೆಗೂ ಸುಮಾರು 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಜನಿಕಾಂತ್‍ರವರು ತಮ್ಮ 70 ವಯಸ್ಸಿನಲ್ಲಿಯೂ ಬೆಳ್ಳಿ ಪರದೆ ಮೇಲೆ ಮಿಂಚುವ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.
ಆದರೆ ಇತ್ತೀಚೆಗೆ ಅಣ್ಣಾತೆ ಚಿತ್ರೀಕರಣದ ವೇಳೆ ರಜನಿಕಾಂತ್‍ರವರು ನಿವೃತ್ತಿ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಟನೆಯಿಂದ ನಿವೃತ್ತಿ ಪಡೆಯುವ ಮುನ್ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದು, ಆದರೆ ಸಿನಿಮಾದಲ್ಲಿ ನಟಿಸಬೇಕಾದರೆ ಆರೋಗ್ಯ ಸರಿಯಾಗಿ ಇರಬೇಕು ಎಂದು ಹೇಳಿದ್ದಾರಂತೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಜನಿಕಾಂತ್‍ರವರು ಸಿದ್ದರಾಗಿ ಅನಾರೋಗ್ಯ ಕಾರಣದಿಂದ ರಾಜಕೀಯದಿಂದಲೂ ದೂರ ಸರಿದರು.
ಸದ್ಯ ರಜನಿಕಾಂತ್‍ರವರು ಅಣ್ಣಾತ್ತೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಈ ಚಿತ್ರದಲ್ಲಿ ರಜನಿಕಾಂತ್‍ರವರಿಗೆ ನಯನತಾರಾ ಜೋಡಿಯಾಗಿದ್ದಾರೆ. ನಿರ್ದೇಶಕ ಶಿವಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಮೀನಾ, ಖುಷ್ಬೂ, ಕೀರ್ತಿ ಸುರೇಶ್, ಜಾಕಿ ಶ್ರಾಫ್, ಜಗಪತಿ ಬಾಬು, ಪ್ರಕಾಶ್ ರಾಜ್ ನಟಿಸಿದ್ದಾರೆ.
Superstar #Rajinikanth returns home to Chennai by a private jet after finishing #Annaatthe shooting at Hyderabad pic.twitter.com/iS9orQ2BbU
— BARaju’s Team (@baraju_SuperHit) May 12, 2021