ಕೋಲಾರ: ವಿಧಾನಸಭೆಯಲ್ಲಿ ಭದ್ರಾವತಿ ಶಾಸಕ ಸಂಗಮೇಶ ಶರ್ಟ್ ಬಿಚ್ಚಿ ದುರ್ವರ್ತನೆ ತೋರಿದರೆ, ಇತ್ತ ಕೋಲಾರದ ನಗರಸಭೆ ಸದಸ್ಯರೊಬ್ಬರೂ ಅಂಗಿ ಕಳಚಿದ ಪ್ರಸಂಗ ನಡೆದಿದೆ.
ಇಂದು ನಡೆದ ಕೋಲಾರ ನಗರಸಭೆಯ ವಿಶೇಷ ತುರ್ತು ಸಭೆಯಲ್ಲಿ ಘಟನೆ ನಡೆದಿದ್ದು, ನಗರ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ಭವನಗಳ ನವೀಕರಣಕ್ಕೆ ಹಣ ಮೀಸಲಿಡುವ ಬಗ್ಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಘಟನೆ ನಡೆದಿದೆ. ಈಗಾಗಲೇ ನಿರ್ಮಾಣವಾಗಿರುವ ಭವನಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದು, ಇದಕ್ಕೆ ಹಣ ಮೀಸಲಿಡಬೇಕು ಎಂದು ಒಂದು ಬಣ ಒತ್ತಾಯಿಸಿದೆ.
ಇನ್ನೊಂದು ಬಣ ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಮಾಜಕಲ್ಯಾಣ ಇಲಾಖೆ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಹ ಹಣ ಬಿಡುಗಡೆಯಾಗುತ್ತದೆ. ನಗರಸಭೆಯಿಂದಲೂ ಅದಕ್ಕೆ ಅನುದಾನ ಏಕೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಪರ ವಿರೋಧದ ಚರ್ಚೆ ತಾರಕಕ್ಕೆ ಹೋಗಿ ಸದಸ್ಯರು ಮತ್ತು ಸ್ಥಾಯಿ ಸಮೀತಿ ಅಧ್ಯಕ್ಷರು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.
ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಸದಸ್ಯರು ದೊಂಬಿ ಸೃಷ್ಟಿಸಿ, ಗಲಾಟೆ ಮಾಡಿದರು. ಈ ವೇಳೆ ಕಾಂಗ್ರೆಸ್‍ನ ಅಂಬರೀಶ್ ಮತ್ತು ಸ್ಥಾಯಿ ಸಮೀತಿ ಅಧ್ಯಕ್ಷ ಮಂಜುನಾಥ್, ಮತ್ತೊರ್ವ ಸದಸ್ಯ ಮುಬಾರಕ್ ಸೇರಿದಂತೆ ಬಹುತೇಕರು ವಾಗ್ವಾದಕ್ಕೆ ಇಳಿದು ಪರಿಸ್ಥಿತಿ ಮಿತಿ ಮೀರಿತು. ಸದಸ್ಯ ಅಂಬರೀಶ್ ತಮ್ಮ ಅಂಗಿಯನ್ನ ಕಳಚಿ ಪ್ರತಿಭಟನೆಗೆ ಇಳಿದರು. ನಗರಸಭೆ ಕಮೀಷನರ್ ಶ್ರೀಕಾಂತ್ ಮತ್ತು ಅಧ್ಯಕ್ಷೆ ಶ್ವೇತ ಶಬರೀಶ್ ಏನೂ ಮಾಡಲಾಗದೆ ಅಸಹಾಯಕರಾಗಿ ಕುಳಿತಿದ್ದರು. ನಂತರ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದು, ಇದಕ್ಕೆ ಹಣ ಬಿಡುಗಡೆ ಮಾಡಬೇಕೆಂಬ ವಿಚಾರ ಇನ್ನೂ ಗೊಂದಲದಲ್ಲಿಯೇ ಮುಂದುವರೆಯಿತು.