ಮುಂಬೈ: ಆಭರಣಗಳ ಬದಲಾವಣೆ ವೇಳೆ ಮಹಿಳೆ ವ್ಯಾಪಾರಿಗೆ ಬರೋಬ್ಬರಿ 180 ಗ್ರಾಂ. ಚಿನ್ನವನ್ನು ಪಂಗನಾಮ ಹಾಕಿರುವ ಘಟನೆ ನಡೆದಿದೆ.
ದಕ್ಷಿಣ ಮುಂಬೈನ ನಾಲ್ ಬಜಾರ್‍ನಲ್ಲಿ ಘಟನೆ ನಡೆದಿದ್ದು, 39 ವರ್ಷದ ಸನಾ ಶೇಖ್ ಚಿನ್ನವನ್ನು ಬದಲಾಯಿಸುವ ವೇಳೆ ವ್ಯಾಪಾರಿಗೆ ಯಾಮಾರಿಸಿದ್ದಾಳೆ. ಬದಲಾವಣೆ ಮಾಡುವ ವೇಳೆ 180 ಗ್ರಾಂ. ನಕಲಿ ಚಿನ್ನದ ಒಡವೆ ನೀಡಿ ವ್ಯಾಪಾರಿಗೆ ಪಂಗನಾಮ ಹಾಕಿದ್ದಾಳೆ. ಕಳೆದ ತಿಂಗಳು ಮಹಿಳೆ ಅಂಗಡಿಯಿಂದ ಚಿನ್ನಾಭರಣ ಕದ್ದಿದ್ದು, ಸದ್ಯ ಪ್ರಕರಣ ಬೆಳಕಿಗೆ ಬಂದಿದೆ.
Advertisement
Advertisement
ಚಿನ್ನಾಭರಣ ಕಾಣದಿರುವುದನ್ನು ಗಮನಿಸಿದ ಅಂಗಡಿ ಮಾಲೀಕ ದೀಪಕ್ ರಾಠೋಡ್, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು, ಈ ವೇಳೆ ನಕಲಿ ಚಿನ್ನಾಭರಣ ನೀಡಿ ಅಸಲಿ ಒಡವೆಗಳನ್ನು ಕೊಂಡೊಯ್ದಿರುವುದು ಪತ್ತೆಯಾಗಿದೆ. ಬಳಿಕ ರಾಠೋಡ್ ಅವರು ಬೈಕಲ್ಲಾ ಪೊಲೀಸರನ್ನು ಸಂಪರ್ಕಿಸಿಸಿದ್ದು, ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Advertisement
Advertisement
ಕಳ್ಳತನದ ಬಗ್ಗೆ ಮುಂಬೈ ಪೊಲೀಸರ ಆಸ್ತಿ ವಿಭಾಗ ತನಿಖೆ ನಡೆಸಿದ್ದು, ಆರೋಪಿ ಮಹಿಳೆಗಾಗಿ ಬಲೆ ಬೀಸಿ, ಬಳಿಕ ಮಹಿಳೆಯನ್ನು ಬಂಧಿಸಿದ್ದಾರೆ. ಕಳೆದ ಕೆಲ ತಿಂಗಳಲ್ಲಿ ಮಹಿಳೆ ಸುಮಾರು ಐದಾರು ಬಾರಿ ಅಂಗಡಿಗೆ ಭೇಟಿ ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಚಿನ್ನದ ಆಭರಣಗಳನ್ನು ಸೆಲೆಕ್ಟ್ ಮಾಡಿ ಅಂತಿಮಗೊಳಿಸಿದ ಬಳಿಕ ಆಭರಣಗಳ ಫೋಟೋ ತೆಗೆದುಕೊಂಡು ಹೋಗಿ ಎರಡ್ಮೂರು ದಿನಗಳ ಬಳಿಕ ಅವುಗಳನ್ನು ಖರೀದಿಸುವುದಾಗಿ ಹೇಳುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಂದಿನ ಬಾರಿ ಮಹಿಳೆ ಭೇಟಿ ನೀಡಿದಾಗ ನಕಲಿ ಆಭರಣಗಳನ್ನು ನೀಡಿ ಹೊಸ ನೈಜ ಆಭರಣಗಳನ್ನು ಖರೀದಿಸುತ್ತಿದ್ದಳು. ಈ ಮೂಲಕ ವ್ಯಾಪಾರಸ್ಥರಿಗೆ ಯಾಮಾರಿಸುತ್ತಿದ್ದಳು. ಈ ಪ್ರಕರಣ ಮಾತ್ರವಲ್ಲದೆ, ಬೇರೆ ಯಾವುದಾದರೂ ಚಿನ್ನದ ವ್ಯಾಪಾರಿಗಳಿಗೆ ಮಹಿಳೆ ಮೋಸ ಮಾಡಿದ್ದಾಳಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.