ಬೆಂಗಳೂರು: ವಿಶ್ವವಿಖ್ಯಾತ ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇ ನಿರ್ಮಾಣ ಮಾಡಲು ಇದೇ ಜುಲೈ 23ಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ರವರು ಸ್ಥಳ ಪರಿಶೀಲನೆ ಮಾಡಲಿದ್ದಾರೆ.
ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ವರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಯೋಗೇಶ್ವರ್ ಅವರು, ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ನಂದಿ ಗಿರಿಧಾಮ ರೋಪ್ ವೇ ಯೋಜನೆಗೆ ತ್ವರಿತವಾಗಿ ಚಾಲನೆ ನೀಡಬೇಕು. ಜುಲೈ 23ರಂದು ಸ್ಥಳ ಪರಿಶೀಲನೆ ಮಾಡಿ ಅತೀ ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಹೇಳಿದರು. ಇದನ್ನೂ ಓದಿ: ಪ್ರವಾಸಿಗರೇ ಶನಿವಾರ, ಭಾನುವಾರ ನಂದಿಬೆಟ್ಟಕ್ಕೆ ಬರಬೇಡಿ
AARCON INFRA ಸಂಸ್ಥೆಯಿಂದ ಪ್ರಾತ್ಯಕ್ಷಿಕೆ ಪ್ರದರ್ಶನ:
ರೋಪ್ ವೇ ನಿರ್ಮಾಣದಲ್ಲಿ ಈ ಸಂಸ್ಥೆಗೆ 51 ವರ್ಷಗಳ ಅನುಭವವಿದ್ದು, ದೇಶ ವಿದೇಶ ಹಾಗೂ ನಮ್ಮ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ 64 ರೋಪ್ ವೇ ಗಳನ್ನು ನಿರ್ಮಾಣ ಮಾಡಿದ್ದಾರೆ. ರಾಜ್ಯದ ಪ್ರಪ್ರಥಮ ರೋಪ್ ವೇ ಯನ್ನು ಪ್ರವಾಸಿಗರಿಗೆ ಒದಗಿಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಸಭೆಯಲ್ಲಿ ಸೂಚಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ, ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕಿ ಸಿಂಧೂ ರೂಪೇಶ್, ಅರಣ್ಯ ಮತ್ತು ವಸತಿ ವಿಹಾರಧಾಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.