– ಎರಡು ತಿಂಗಳಿಂದ ಹಾಲು ಕಳ್ಳತನ
– ಕಳ್ಳರ ಕಾಟಕ್ಕೆ ಬೇಸತ್ತ ಮಾರಾಟಗಾರರು
ಯಾದಗಿರಿ: ನಂದಿನಿ ಹಾಲಿನ ಪಾರ್ಲರ್‌ಗಳನ್ನು ಟಾರ್ಗೆಟ್ ಮಾಡಿ, ರಾತ್ರೋ ರಾತ್ರಿ ಹಾಲು ದರೋಡೆ ಮಾಡುತ್ತಿರುವ ಖದೀಮರ ಗ್ಯಾಂಗ್ ಒಂದು ಯಾದಗಿರಿಯಲ್ಲಿ ಆ್ಯಕ್ಟಿವ್ ಆಗಿದೆ.
ಕಳೆದ ಎರಡು ತಿಂಗಳಿಂದ ಪಾರ್ಲರ್‌ಗಳಿಗೆ ಮಧ್ಯ ರಾತ್ರಿ ಹಾಲು ಹಾಕಿದ ಬಳಿಕ ಕಳ್ಳ ಬೆಕ್ಕಿನಂತೆ ಬರುವ ಈ ಗ್ಯಾಂಗ್‍ನ ಸದಸ್ಯರು ಸದ್ದಿಲ್ಲದೆ ಹಾಲು ಕಳ್ಳತನ ಮಾಡಿ ಕ್ಷಣಾರ್ಧದಲ್ಲಿ ಸ್ಥಳದಿಂದ ಎಸ್ಕೇಪ್ ಆಗುತ್ತಿದ್ದಾರೆ.
ನಂದಿನಿ ಡೈರಿಯಿಂದ ಮಧ್ಯ ರಾತ್ರಿಯಲ್ಲಿ ಪಾರ್ಲರ್‌ಗಳಿಗೆ ಹಾಲನ್ನು ಸರಬರಾಜು ಮಾಡಲಾಗುತ್ತದೆ. ಈ ಸಮಯದಲ್ಲಿ ಪಾರ್ಲರ್‌ಗಳ ಮಾಲೀಕರು, ಸ್ಥಳದಲ್ಲಿ ಇರುವುದು ಕಡಿಮೆ, ಹೀಗಾಗಿ ಹಾಲಿನ ಟ್ರೇಗಳನ್ನು ಅಂಗಡಿಯ ಮುಂದುಗಡೆ ಇಳಿಸಿ ಹೋಗಲಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು, ಅಂಗಡಿ ಮುಂದೆ ಇಟ್ಟಿರುವ ಹಾಲಿನ ಟ್ರೇಯಿಂದ ಕೈಗೆ ಸಿಕ್ಕಷ್ಟು ಪ್ಯಾಕೆಟ್ ಎಗರಿಸಿ, ಬೈಕ್‍ನಲ್ಲಿ ಎಸ್ಕೇಪ್ ಆಗುತ್ತಿದ್ದಾರೆ. ಕಳ್ಳರ ಕಾಟಕ್ಕೆ ಹಾಲು ಮಾರಾಟಗಾರರು ಬೇಸತ್ತಿದ್ದಾರೆ.
ಯಾದಗಿರಿ ನಗರದ ನಂದಿನಿ ಸೇರಿದಂತೆ ವಿವಿಧ ಕಂಪನಿ ಹಾಲಿನ ಪಾರ್ಲರ್‌ಗಳ ಮಾಲೀಕರಿಗೆ ಇದೀಗ ಹಾಲು ಕಳ್ಳರ ಕಾಟ ಹೆಚ್ಚಾಗಿದೆ. ಇನ್ನೂ ಈ ಕಳ್ಳರ ಕೈಚಳಕದ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಲಿನ ಕಳ್ಳತನ ಮಾಡುತ್ತಿರುವ ಬಗ್ಗೆ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.