ನಂದಿಗಿರಿಧಾಮ ಲಾಕ್‍ಡೌನ್ ಮುಕ್ತಾಯ – ಸೆ.7ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ

Public TV
2 Min Read
ckb 1

– ಬೆಳಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ಮಾತ್ರ ಅವಕಾಶ

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ಲಾಕ್‍ಡೌನ್ ಮುಕ್ತವಾಗಲಿದ್ದು, ಸೆಪ್ಟೆಂಬರ್ 07 ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ ಅಂತ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಕೊರೊನಾ ಹರಡುವ ಭೀತಿಯಿಂದ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನ ಬಂದ್ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಲಾಕ್‍ಡೌನ್ ಆದೇಶ ಮಾಡಿತ್ತು. ಸದ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್‍ಡೌನ್ ಅನ್‍ಲಾಕ್ ಮಾರ್ಗಸೂಚಿ 4.0 ಬಿಡುಗಡೆ ನಂತರ ಜಿಲ್ಲಾಡಳಿತ ನಂದಿಬೆಟ್ಟಕ್ಕೆ ಹೇರಲಾಗಿದ್ದ ಲಾಕ್‍ಡೌನ್ ತೆರವುಗೊಳಿಸಿದೆ. ಇದೇ ತಿಂಗಳ 7ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದು, ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಿ ಸಮಯ ನಿಗದಿ ಮಾಡಿದೆ.

ckb nandi hills 6

ಮುಂದಿನ ಸೋಮವಾರದಿಂದ ಪ್ರವಾಸಿಗರಿಗೆ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ಸಿಗುತ್ತಿದ್ದು, ಸಾಕಷ್ಟು ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸುವ ಸಾಧ್ಯತೆಯಿದೆ. ಕೊರೊನಾ ಸೋಂಕಿನ ಆತಂಕದಿಂದ ಮನೆಯಲ್ಲಿದ್ದ ಜನರಿಗೆ ನಂದಿಬೆಟ್ಟದ ಪ್ರಾಕೃತಿಕ ಸೊಬಗು ಸೌಂದರ್ಯ ಸವಿಯುವ ಅವಕಾಶ ಸಿಗುತ್ತಿರೋದು ಸಂತಸ ತಂದಿದೆ.

ckb nandi hills 4

ಮಾಸ್ಕ್ ಧರಿಸದಿದ್ರೆ ದಂಡ:
ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸಿದವರಿಗೆ ಮಾತ್ರ ನಂದಿಬೆಟ್ಟಕ್ಕೆ ಪ್ರವೇಶ ನೀಡಲಾಗುವುದು ಅಂತ ನಂದಿಗಿರಿಧಾಮ ವಿಶೇಷಾಧಿಕಾರಿ ಗೋಪಾಲ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ನಂದಿಬೆಟ್ಟದ ತಪ್ಪಲು ಚೆಕ್‍ಪೋಸ್ಟ್ ಬಳಿಯೇ ಮಾಸ್ಕ್ ಧರಿಸಿರುವ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ನಂತರ ಪ್ರವಾಸಿಗರಿಗೆ ನಂದಿಗಿರಿಧಾಮಕ್ಕೆ ಪ್ರವೇಶ ನೀಡಲಾಗುವುದು. ಒಂದು ವೇಳೆ ಪ್ರವೇಶದ ವೇಳೆ ಮಾಸ್ಕ್ ಧರಿಸಿ ತದನಂತರ ಬೆಟ್ಟದ ಮೇಲೆ ಬಂದು ಮಾಸ್ಕ್ ಧರಿಸದೆ ಓಡಾಡಿ ನಿರ್ಲಕ್ಷ್ಯವಹಿಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ckb nandi hills 3

ಮಾಸ್ಕ್ ಕಡ್ಡಾಯದ ಜೊತೆಗೆ ಸಾಮಾಜಿಕ ಅಂತರ ಸಹ ಕಾಯ್ದುಕೊಳ್ಳಬೇಕಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರು ಗುಂಪುಗೂಡಿದರೂ ಸಾಮಾಜಿಕ ಅಂತರದ ಕಡೆ ಗಮನ ಹರಿಸಬೇಕು. ಅನಾವಶ್ಯಕವಾಗಿ ಗುಂಪುಗೂಡಬಾರದು, ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಗೋಪಾಲ್ ಮನವಿ ಮಾಡಿದ್ದಾರೆ. ಇದರ ಜೊತೆಗೆ ನಂದಿಗಿರಿಧಾಮದಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ನೀರಿನ ಬಾಟಲ್ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನ ಪ್ರವಾಸಿಗರು ತರಬಾರದು ಎಂದು ತಿಳಿಸಿದ್ದಾರೆ.

ckb nandi hills 5

ಪ್ರವಾಸಿಗರಿಗೆ ಕುಡಿಯುವ ನೀರು ಓದಗಿಸುವ ಸಲುವಾಗಿ ಆರ್‍ಓ ಪ್ಲಾಂಟ್‍ಗಳನ್ನ ಅಳವಡಿಸಲಾಗುತ್ತಿದೆ. 5 ತಿಂಗಳ ನಂತರ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ಪುನಾರರಂಭವಾಗಲಿದ್ದು, ಪ್ರವಾಸಿಗರು ನಂದಿಬೆಟ್ಟಕ್ಕೆ ಕಾಲಿಡೋಕೆ ತುದಿಗಾಲಲ್ಲಿ ಕಾತುರದಿಂದ ಕಾಯುತ್ತಿದ್ದಾರೆ. ರಾತ್ರಿ ಹಾಗೂ ಬೆಳ್ಳಂಬೆಳಗ್ಗೆಯೇ ಪ್ರವಾಸಿಗರು ಬಂದು ಕಾಯುವುದು ಬೇಡ. 8 ಗಂಟೆಯ ನಂತರ ಪ್ರವಾಸಿಗರು ಬಂದು ನಂದಿಬೆಟ್ಟದ ಸೊಬಗನ್ನ ಸವಿಯುವಂತೆ ಡಿಸಿ ಆರ್.ಲತಾ ಮನವಿ ಮಾಡಿದ್ದಾರೆ. ಒಂದು ವಾರ ಹಾಗೂ 15 ದಿನಗಳ ಕಾಲ ಪ್ರವಾಸಿಗರ ಸಂಖ್ಯೆಯನ್ನ ಅವಲೋಕಿಸಿ ಮುಂದಿನ ದಿನಗಳಲ್ಲಿ ಬೆಳಗ್ಗೆ ಇನ್ನೂ ಬೇಗ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡುವ ಬಗ್ಗೆ ತೀರ್ಮಾನಿಸಲಾಗುವುದು

ckb nandi hills 8

Share This Article
Leave a Comment

Leave a Reply

Your email address will not be published. Required fields are marked *