– ನಾನು ಪಕ್ಷದ ತೀರ್ಮಾನಕ್ಕೆ ಬದ್ಧ
– ನೇರವಾಗಿ ಶಾಸಕರಿಗೆ ಅನುದಾನ ನೀಡುವುದು ಸರಿಯಲ್ಲ
– ಇಲಾಖೆಯ ಮೂಲಕ ಹಂಚಿಕೆಯಾಗಬೇಕು
ಮೈಸೂರು: ನಾನು ಧ್ವನಿ ಎತ್ತಿರುವುದು ನಿಯಮ ಪಾಲನೆ ಬಗ್ಗೆ ಮಾತ್ರ. ರೆಬೆಲ್ ಅಲ್ಲ, ನಾನು ಪಕ್ಷಕ್ಕೆ ಲಾಯಲ್ ಆಗಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ನನ್ನ ಹಾಗೂ ಯಡಿಯೂರಪ್ಪ ಅವರ ನಡುವಿನ ವೈಯಕ್ತಿಕ ವಿಚಾರವಲ್ಲ. ನಿಯಮಗಳನ್ನು ಮೀರಬಾರದು ಎಂಬ ವಿಚಾರ ನನ್ನದು ಅಷ್ಟೇ. ಈ ವಿಚಾರದಲ್ಲಿ ಕೆಲವರಿಗೆ ಗೊಂದಲವಿದೆ ಎಂದು ರಾಜ್ಯಪಾಲರಿಗೆ ಬರೆದ ಪತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಇಲಾಖೆಗೆ ಬಿಡುಗಡೆಯಾದ ಹಣವನ್ನು ಇಲಾಖೆಯವರೇ ವೆಚ್ಚ ಮಾಡಬೇಕು. ಆದರೆ ಸದ್ಯ ಬಿಡುಗಡೆಯಾಗಿರುವ ಅನುದಾನದ ಪಟ್ಟಿ ಇಲಾಖೆಯ ಮಂತ್ರಿ ಗಮನಕ್ಕೆ ಬಾರದೆ ನೇರವಾಗಿ ಶಾಸಕರಿಗೆ ನೀಡಲಾಗಿದೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತಿಗೆ 65 ಕೋಟಿ ರೂ ಕೊಡಲಾಗಿದೆ. ಇದು ನನ್ನ ಗಮನಕ್ಕೆ ಬಂದಿಲ್ಲ. ಇದು ಕಾನೂನು ಉಲ್ಲಂಘನೆ. ಈ ಬಗ್ಗೆ ನಾನು ಆರ್ಥಿಕ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಈ ಕುರಿತು ನಮ್ಮ ಕಡೆಯಿಂದ ತಪ್ಪಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದರು.
ನಾನು ಈ ವಿಚಾರವನ್ನೂ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯದ ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಎಲ್ಲರ ಗಮನಕ್ಕೂ ತಂದಿದ್ದೇನೆ. ಸಿಎಂ ಹಣ ಬಿಡುಗಡೆಗೆ ಆದೇಶ ಹೊರಡಿಸಿ ನಂತರ ನನ್ನ ಗಮನಕ್ಕೆ ತರಲಾಗಿದೆ. ಆರ್‍ಡಿಪಿಆರ್ ಪ್ರಿನ್ಸಿಪಲ್ ಸೆಕ್ರೆಟರಿ ಇದನ್ನು ಈಗ ತಡೆ ಹಿಡಿದಿದ್ದಾರೆ. ಸಿಎಂ ನನ್ನ ಗಮನಕ್ಕೆ ತರದೇ ಹಣ ಬಿಡುಗಡೆ ಮಾಡಿರೋದರಿಂದ ಇದನ್ನು ತಡೆ ಹಿಡಿಯಲಾಗಿದೆ ಎಂದು ಹೇಳಿದರು.
ನೇರವಾಗಿ ಶಾಸಕರಿಗೆ ಅನುದಾನ ಹಂಚಿಕೆ ಮಾಡಿರುವುದು ಸರಿಯಲ್ಲ. ಅವರು ನಮ್ಮ ಇಲಾಖೆಗೆ ನೇರವಾಗಿ ಅನುದಾನ ನೀಡಲಿ. ಸಿಎಂ ಯಾವ ಶಾಸಕರಿಗೆ ಹೇಳುತ್ತಾರೋ ಅವರಿಗೆ ಹಣ ಬಿಡುಗಡೆ ಮಾಡುತ್ತೇನೆ. ಮಂತ್ರಿಗಳು, ಶಾಸಕರು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಮಂತ್ರಿ ಸ್ಥಾನ ಬದಲಾವಣೆ ಮಾಡ್ತಿವಿ ಅಂತಾ ಹೇಳಿದ್ದಾರೆ. ಇದ್ಯಾವುದಕ್ಕೂ ನಾನು ಜಗ್ಗಲ್ಲ ಎಂದು ಸ್ಪಷ್ಟನೆ ನೀಡಿದರು.
ನಾನು ಪಕ್ಷವನ್ನು ತಾಯಿ ಅಂತಾ ಅಂದುಕೊಂಡಿದ್ದೇನೆ. ಸಿಎಂ ನಮ್ಮ ಇಲಾಖೆಯಿಂದ ಹಣ ಬಿಡುಗಡೆ ಮಾಡಿದ ವ್ಯಕ್ತಿ ಸಿಎಂ ಸಂಬಂಧಿಕರೋ ಅಲ್ಲವೋ ನನಗೆ ಗೊತ್ತಿಲ್ಲ. ಕೆಲವು ವಿಚಾರದಲ್ಲಿ ನನಗೂ ಅವರಿಗೂ ದೂರವಿದೆ. ನಾನು ಮಾಡಿದ್ದು ಸರಿಯೋ? ತಪ್ಪೋ ಎಂಬುದನ್ನು ಪಕ್ಷವೇ ತೀರ್ಮಾನ ಮಾಡುತ್ತದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದರು.
ಈ ವೇಳೆ ಕೆಜೆಪಿ ಬಗ್ಗೆ ಮಾತನಾಡಿದ ಈಶ್ವರಪ್ಪ, ಯಡಿಯೂರಪ್ಪ ಅವರು ಕೆಜೆಪಿ ಶುರು ಮಾಡುತ್ತೇನೆ ಅಂತಾ ಶುರು ಮಾಡಿದರು. ನಾವು ಅವರು ಬಿಸಿನೆಸ್ ಪಾಲುದಾರರಾಗಿದ್ದೆವು. ಅವರು ಮತ್ತೆ ಬಿಜೆಪಿಗೆ ವಾಪಾಸ್ ಬರಲು ಮಗ ರಾಘವೇಂದ್ರ ಮೂಲಕ ನನ್ನ ಬಳಿ ಪ್ರಯತ್ನ ಮಾಡಿದ್ದರು. ಆಗ ನಾನು ಯಾರ ಯಾರ ಬಳಿ ಮಾತಾಡಬೇಕೋ ಮಾತಾಡಿದೆ. ನಾನು ಡಿ.ಎಚ್. ಶಂಕರಮೂರ್ತಿ, ಲೆಹರ್ ಸಿಂಗ್, ಯಡಿಯೂರಪ್ಪ ಸೇರಿ ಸಭೆ ಮಾಡಿದೆವು. ಆಗ ಯಡಿಯೂರಪ್ಪ ಅವರು ಕೆಲವರು ನನ್ನ ದಾರಿ ತಪ್ಪಿಸಿ ಪಾರ್ಟಿ ಕಟ್ಟಿಸಿದರು ಎಂದು ನೋವಿನಿಂದ ಹೇಳಿದರು. ಯಡಿಯೂರಪ್ಪ ಬಹಳ ಬೇಗ ಕೆಲವರ ಮಾತು ನಂಬುತ್ತಾರೆ ಎಂದು ಹೇಳಿದರು.