ಬೆಂಗಳೂರು: ಹೃದಯಾಘಾತದಿಂದ ಸಾವನ್ನಪ್ಪಿದ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆಯನ್ನು ತಮ್ಮ ಧ್ರುವ ಸರ್ಜಾ ಅವರ ಫಾರ್ಮ್‍ಹೌಸ್‍ನಲ್ಲಿ ನಡೆಯಲಿದೆ.
ಭಾನುವಾರ ಮಧ್ಯಾಹ್ನ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿರು ಅವರು ಸಾವನ್ನಪ್ಪಿದ್ದರು. ಈಗ ಅವರ ಮೃತದೇಹವನ್ನು ಬಸವನಗುಡಿಯ ಅವರ ನಿವಾಸದಲ್ಲಿ ಇಡಲಾಗಿದೆ. ಸೋಮವಾರ ಮಧ್ಯಾಹ್ನ 1 ಗಂಟೆಗೆ ಕನಕಪುರ ರಸ್ತೆ ಬಳಿ ಇರುವ ಧ್ರುವ ಸರ್ಜಾ ಫಾರ್ಮ್‍ಹೌಸ್ ಅಲ್ಲಿ ಚಿರು ಅಂತ್ಯಕ್ರಿಯೆ ಮಾಡಲು ಮಾತುಕತೆ ನಡೆದಿದೆ ಎಂದು ಸರ್ಜಾ ಕುಟುಂಬದ ಆಪ್ತ ಶಿವಾರ್ಜುನ್ ಹೇಳಿದ್ದಾರೆ.
ಈ ಮೊದಲು ಚಿರು ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ನಂತರ ಕನಕಪುರ ರಸ್ತೆ ಬಳಿಯಿರುವ ನೆಲಗೂಳಿ ಗ್ರಾಮದಲ್ಲಿರುವ ಧ್ರುವ ಸರ್ಜಾ ಫಾರ್ಮ್‍ಹೌಸ್ ಅಲ್ಲಿ ಅಂತ್ಯಕ್ರಿಯೆ ಮಾಡಲು ಚಿರಂಜೀವಿ ಸರ್ಜಾ ಕುಟುಂಬ ವರ್ಗದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಶಿವಾರ್ಜುನ್ ತಿಳಿಸಿದ್ದಾರೆ.
ನಾಳೆ ಮಧ್ಯಾಹ್ನದವರೆಗೂ ಬಸವನಗುಡಿಯ ಮನೆಯ ಬಳಿಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಮಧ್ಯಾಹ್ನ ಒಂದು ಗಂಟೆಗೆ ಅಂತ್ಯಕ್ರಿಯೆ ಮಾಡಲು ತೀರ್ಮಾನಿಸಿದ್ದಾರೆ. ಸದ್ಯ ಚಿರು ಅವರ ಮಾವ ನಟ ಅರ್ಜುನ್ ಸರ್ಜಾ ಅವರು ಚೆನ್ನೈನಿಂದ ಬರುತ್ತಿದ್ದು, ಕುಟುಂಬ ವರ್ಗ ಅವರಿಗಾಗಿ ಕಾಯುತ್ತಿದ್ದಾರೆ. ತಮ್ಮ ಧುವ ಸರ್ಜಾ ಮುಂದೆ ನಿಂತು ಸದ್ಯದ ಕೆಲಸಗಳನ್ನು ಮಾಡುತ್ತಿದ್ದಾರೆ.
ಒಟ್ಟು 22 ಚಿತ್ರಗಳಲ್ಲಿ ನಟಿಸಿದ್ದ ಚಿರುಗೆ ಕೇವಲ 39 ವರ್ಷವಾಗಿತ್ತು. ಹಠಾತ್ ಆಗಿ ಇಷ್ಟು ಚಿಕ್ಕ ವಯಸ್ಸಿಗೇ ನಿಧನರಾಗಿರೋದು ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಚಿತ್ರರಂಗದ ಎಲ್ಲಾ ಹಿರಿಯ, ಕಿರಿಯ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ, ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ರು. ಅಯ್ಯೋ.. ಇದೊಂದು ಅನ್ಯಾಯದ ಸಾವು, ಕ್ರೂರ ವಿಧಿಯಾಟ ಅಂತ ಹೃದಯ ಕಿತ್ತುಬರುವಂತೆ ಭಾವುಕರಾಗಿದ್ದಾರೆ. ಅದರಲ್ಲೂ 2 ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿ ಮೇಘನಾ ಇದೀಗ ಗರ್ಭಿಣಿಯಾಗಿದ್ದು ಎಲ್ಲರೂ ಮರುಕಪಟ್ಟಿದ್ದಾರೆ.