– ಸಿಎಸ್ಕೆ ತಂಡದ ಸಕ್ಸಸ್ ಮಂತ್ರ ಬಿಚ್ಚಿಟ್ಟ ಕೋಚ್
ಮುಂಬೈ: ಭಾರತದ ಮಾಜಿ ನಾಯಕ ಎಂಎಸ್ ಧೋನಿಯವರು ಐಪಿಎಲ್‍ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಂಟಿಗ್ ಕೋಚ್ ಮೈಕ್ ಹಸ್ಸಿ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಸ್‍ಕೆ ತಂಡದ ಬಗ್ಗೆ ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೇ ವೇಳೆ ನಾನು ಯುಎಇ ಕ್ರಿಕೆಟ್ ಮೈದಾನದಲ್ಲಿ ಜನರಿಲ್ಲದೇ ನಡೆಯುವ ಐಪಿಎಲ್ ಪಂದ್ಯಗಳನ್ನು ನೋಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ಜೊತಗೆ ಯುಎಇನ ಪರಿಸ್ಥಿತಿಗೆ ಆಟಗಾರರು ಹೇಗೆ ಹೊಂದಿಕೊಳ್ಳುತ್ತಾರೆ ನೋಡಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಸಿಎಸ್‍ಕೆ ತಂಡದ ಬ್ಯಾಟಿಂಗ್ ಬಲದ ಬಗ್ಗೆ ಮಾತನಾಡಿರುವ ಹಸ್ಸಿ, ನಮ್ಮ ತಂಡಕ್ಕೆ ಬ್ಯಾಂಟಿಗ್ ಬಲ ಬಹಳ ಇದೆ. ಜೊತೆಗೆ ನಾವು ಬಹಳ ಬ್ಯಾಲೆನ್ಸ್ ಆಗಿರುವ ಆಟಗಾರರನ್ನು ಹೊಂದಿದ್ದೇವೆ. ನಮ್ಮ ತಂಡ ಎಲ್ಲ ವಿಭಾಗದಿಂದಲೂ ಬಹಳ ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಟೀಂನ ಸಕ್ಸಸ್ ಮಂತ್ರದ ಬಗ್ಗೆ ಮಾತನಾಡಿದ ಹಸ್ಸಿ, ನಮ್ಮ ತಂಡ ಯಶಸ್ಸಿಗೆ ಒಂದು ನಿರ್ದಿಷ್ಟ ಮಂತ್ರ ಎಂದು ಇಲ್ಲ. ಆದರೆ ನಾವು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಆಡುತ್ತೇವೆ. ಜೊತೆಗೆ ಆಟಗಾರ ಉತ್ತಮವಾಗಿ ಆಡಲು ನೆರವಾಗುವ ಪರಿಸರವನ್ನು ನಾವು ಕ್ರಿಯೇಟ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಧೋನಿಯವರು ಯಾವ ಕ್ರಮಾಂಕದಲ್ಲಿ ಆಡಿದರೆ ಬೆಸ್ಟ್ ಎಂಬ ಪ್ರಶ್ನೆಗೆ ಉತ್ತರಿಸಿದ ಹಸ್ಸಿ, ಧೋನಿ 4ನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ. ಆದರೆ ಮಿಡಲ್ ಆರ್ಡರ್ ಬ್ಯಾಟಿಂಗ್‍ನಲ್ಲಿ ನಾವು ಸಮಯಕ್ಕೆ ತಕ್ಕ ಕೆಲ ಬದಲವಾಣೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಬಿಸಿಸಿಐ ಸೂಚಿಸಿರುವ ಮಾರ್ಗ ಸೂಚಿಯ ಬಗ್ಗೆ ಮಾತನಾಡಿದ ಹಸ್ಸಿ, ನಾವು ನಿಯಮಗಳನ್ನು ಪಾಲನೆ ಮಾಡಲೇಬೇಕು. ಅದು ನಮಗೆ ಉಪಯುಕ್ತವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲೇ ನಡೆಯಬೇಕಿದ್ದ ಐಪಿಎಲ್-2020 ಕೊರೊನಾ ವೈರಸ್ ಕಾರಣದಿಂದ ಮುಂದಕ್ಕೆ ಹೋಗಿತ್ತು. ಈಗ ಮುಂದಿನ ತಿಂಗಳು 19ರಿಂದ ಐಪಿಎಲ್ ಅನ್ನು ಯುಎಇಯಲ್ಲಿ ಆರಂಭ ಮಾಡಲು ಬಿಸಿಸಿಐ ತೀರ್ಮಾನ ಮಾಡಿದೆ. ಅದರಂತೆ ಎಲ್ಲ ತಂಡಗಳು ಈಗಾಗಲೇ ತಯಾರಿ ನಡೆಸುತ್ತಿವೆ. ಎಲ್ಲ ಆಟಗಾರರಿಗೂ ಕೊರೊನಾ ಟೆಸ್ಟ್ ಮಾಡಿಸಲಿದ್ದು, ನೆಗೆಟಿವ್ ವರದಿ ಬಂದ ಆಟಗಾರರು ಐಪಿಎಲ್ ಆಡಲು ಯುಎಇಗೆ ತೆರಳಲಿದ್ದಾರೆ.