– ಮುರುಳಿ ವಿಜಯ್ ಟಿ-20 ಆಡುವಂತೆ ಕಾಣುತ್ತಿಲ್ಲ
ನವದೆಹಲಿ: ಎಂಎಸ್ ಧೋನಿಯವರು ಚೆನ್ನೈ ತಂಡಕ್ಕಾಗಿ ನಾಲ್ಕನೇ ಕ್ರಮಾಂಕದಲ್ಲಿ ಆಡುವಷ್ಟರಲ್ಲಿ ಭಾರತಕ್ಕೆ ಬುಲೆಟ್ ಟ್ರೈನ್ ಬರುತ್ತೆ ಎಂದು ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರ ಹಾಸ್ಯ ಮಾಡಿದ್ದಾರೆ.
ಐಪಿಎಲ್‍ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಈ ಬಾರಿಯ ಐಪಿಎಲ್‍ನಲ್ಲಿ ನಿರಾಸೆಯ ಪ್ರದರ್ಶನ ತೋರುತ್ತಿದೆ. ಅನುಭವಿ ಆಟಗಾರ ಗೈರು, ಉತ್ತಮ ಆಟಗಾರ ಗಾಯದ ಸಮಸ್ಯೆಯಿಂದ ಚೆನ್ನೈ ತಂಡ ವೀಕ್ ಆದಂತೆ ಕಾಣುತ್ತಿದೆ. ಈ ನಡುವೆ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ಚರ್ಚೆಯಾಗುತ್ತಿದೆ.
ಈ ನಡುವೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಾತನಾಡಿರುವ ಸೆಹ್ವಾಗ್ ಅವರು, ಸಿಎಸ್‍ಕೆ ತಂಡದ ಆರಂಭ ಉತ್ತಮವಾಗಿತ್ತು. ಆದರೆ ಕಳೆದ ಎರಡು ಪಂದ್ಯಗಳಿಂದ ಚೆನ್ನೈ ತಂಡ ಮಂಕಾಗಿದೆ. ಮುರುಳಿ ವಿಜಯ್ ಟಿ-20 ಆಡುವಂತೆ ಕಾಣುತ್ತಿಲ್ಲ. ಶೇನ್ ವಾಟ್ಸನ್ ಹಳೆಯ ಇಂಜಿನ್‍ನಂತೆ. ಅವರಿಗೆ ಸ್ಟಾರ್ಟಿಂಗ್ ಟ್ರಬಲ್ ಇದೆ. ಫಾಪ್ ಡು ಫ್ಲೆಸಿಸ್ ಅವರು ಬಂದು ತಮ್ಮ ತಂಡಕ್ಕೆ ನಾವು ಆಡುತ್ತಿರುವುದು ಟಿ-20, ಟೆಸ್ಟ್ ಅಲ್ಲ ಎಂಬುದನ್ನು ಆರ್ಥ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಧೋನಿ ಬ್ಯಾಟಿಂಗ್ ಕ್ರಮಾಂಕದ ಕುರಿತು ಮಾತನಾಡಿರುವ ಸೆಹ್ವಾಗ್, ತಂಡ ತೊಂದರೆಯಲ್ಲಿ ಇದ್ದರೂ ಕೂಡ ಎಂಎಸ್ ಧೋನಿಯವರು ಬ್ಯಾಟ್ ಮಾಡಲು ಬರುತ್ತಿಲ್ಲ. ಎಂಎಸ್ ಧೋನಿ ತಂಡಕ್ಕಾಗಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಮನಸ್ಸು ಮಾಡುವುದರೊಳಗೆ ಭಾರತಕ್ಕೆ ಬುಲೆಟ್ ಟ್ರೈನ್ ಬರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಸದ್ಯ ಸೆಹ್ವಾಗ್ ಅವರ ಈ ವಿಡಿಯೋ ವೈರಲ್ ಆಗಿದೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಹೀನಾಯ ಸೋಲನ್ನು ಕಂಡಾಗ ಟ್ವೀಟ್ ಮಾಡಿದ್ದ ಸೆಹ್ವಾಗ್ ಅವರು, ಚೆನ್ನೈ ಬ್ಯಾಟ್ಸ್ ಮನ್ಸ್ ಸರಿಯಾಗಿ ಆಡುತ್ತಿಲ್ಲ. ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಹೋಗುವ ಮೊದಲು ಗ್ಲುಕೋಸ್ ತೆಗೆದುಕೊಂಡು ಬರುವಂತೆ ಹೇಳಿದ್ದರು. ಜೊತೆಗೆ ಧೋನಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು.
ಚೆನ್ನೈ ತಂಡದ ಕೀ ಪ್ಲೇಯರ್ಸ್ ಟೀಮಿನಲ್ಲಿ ಇಲ್ಲದೇ ಇರುವುದು ಚೆನ್ನೈಗೆ ಮುಳುವಾಗಿ ಕಾಡುತ್ತಿದೆ. ವೈಯಕ್ತಿಕ ಕಾರಣ ಹೇಳಿ ರೈನಾ ಅವರು ಟೂರ್ನಿಯಿಂದ ಹೊರಬಂದಿದ್ದಾರೆ. ಜೊತೆಗೆ ಉತ್ತಮ ಲಯದಲ್ಲಿದ್ದ ಅಂಬಾಟಿ ರಾಯುಡು ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ತಂಡದಲ್ಲಿ ಬ್ಯಾಟಿಂಗ್ ಲೈನಪ್ ಜೋಡಣೆ ಮಾಡುವುದು ಕಷ್ಟವಾಗುತ್ತಿದೆ ಎಂದು ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಚೆನ್ನೈ ಮುಂದಿನ ಪಂದ್ಯವನ್ನು ಅಕ್ಟೋಬರ್ 2ರಂದು ಆಡಲಿದ್ದು, ಈ ತಂಡದಲ್ಲಿ ಉತ್ತಮ ಆಟದೊಂದಿಗೆ ತಂಡ ಕಮ್‍ಬ್ಯಾಕ್ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.