ಮುಂಬೈ: ನಿವೃತ್ತಿ ಘೋಷಣೆ ಮಾಡಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿಯವರಿಗೆ ವಿದಾಯ ಪಂದ್ಯವನ್ನು ಆಡಿಸಬೇಕು ಎಂಬ ಮಾತು ಎಲ್ಲೆಡೆ ಕೇಳಿಬರುತ್ತದೆ.
ಅಗಸ್ಟ್ 15ರಂದು ಸಂಜೆ ಎಂಎಸ್ ಧೋನಿಯವರು ಕೇವಲ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಹೇಳಿದ್ದರು. ಈ ಮೂಲಕ ಮತ್ತೆ ಧೋನಿಯವರನ್ನು ನೀಲಿ ಜೆರ್ಸಿಯಲ್ಲಿ ನೋಡಾ ಬಯಸಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಜೊತೆಗೆ ವಿದಾಯ ಪಂದ್ಯವಾಡದೇ ಧೋನಿ ನಿವೃತ್ತಿ ಹೊಂದಿದ್ದು, ಅವರ ಅಭಿಮಾನಿಗಳಿಗೆ ಬೇಸರ ತರಿಸಿತ್ತು.
Advertisement
Advertisement
ಇದರ ಜೊತೆಗೆ ಧೋನಿಯವರಿಗೆ ವಿದಾಯ ಪಂದ್ಯವನ್ನು ಆಡಿಸಬೇಕು ಎಂಬ ಒತ್ತಾಯಗಳು ಕೂಡ ಕೇಳಿ ಬಂದಿದ್ದವು. ಇತ್ತೀಚೆಗೆ ಈ ವಿಚಾರವಾಗಿ ಮಾತನಾಡಿದ್ದ ಜಾರ್ಖಂಡ್ ಸಿಎಂ ಹೇಮಂತ್ ಸೂರೆನ್, ಧೋನಿ ನಮ್ಮ ದೇಶದ ಮತ್ತು ರಾಜ್ಯದ ಹೆಮ್ಮೆ. ಆತನನ್ನು ಮತ್ತೆ ನೀಲಿ ಬಣ್ಣದ ಜೆರ್ಸಿಯಲ್ಲಿ ನೋಡಲು ಆಗಲ್ಲ ಎಂಬುದು ನೋವಾಗಿದೆ. ಹೀಗಾಗಿ ಅವರಿಗೆ ವಿದಾಯ ಪಂದ್ಯವನ್ನು ಆಡಿಸಬೇಕು ಎಂದು ಬಿಸಿಸಿಐಗೆ ಒತ್ತಾಯ ಮಾಡಿದ್ದರು.
Advertisement
Advertisement
ಈಗ ಈ ವಿಚಾರದ ಬಗ್ಗೆ ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಇದೀಗ ಯಾವುದೇ ಅಂತಾರಾಷ್ಟ್ರೀಯ ಸರಣಿಗಳಿಲ್ಲ. ಬಹುಶಃ ಐಪಿಎಲ್ ನಂತರ ನಾವು ಏನು ಮಾಡಬಹುದೆಂದು ನೋಡುತ್ತೇವೆ. ಏಕೆಂದರೆ ಧೋನಿ ರಾಷ್ಟ್ರಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಮತ್ತು ಅವರು ಎಲ್ಲ ಗೌರವಗಳಿಗೆ ಅರ್ಹರು. ನಾವು ಅವರಿಗೆ ಬೀಳ್ಕೊಡುಗೆ ಪಂದ್ಯವನ್ನು ನಡೆಸಲು ಬಯಸಿದ್ದೆವು. ಆದರೆ ಧೋನಿ ವಿಭಿನ್ನ ಆಟಗಾರ. ಯಾರೂ ಯೋಚಿಸದಿದ್ದಾಗ ಅವರು ನಿವೃತ್ತಿಯನ್ನು ಘೋಷಿಸಿದರು ಎಂದು ಹೇಳಿದ್ದಾರೆ.
ಬಿಸಿಸಿಐ ವಿದಾಯದ ಪಂದ್ಯದ ಬಗ್ಗೆ ಧೋನಿಯೊಂದಿಗೆ ಇನ್ನೂ ಮಾತನಾಡಲಿಲ್ಲ. ಆದರೆ ಧೋನಿ ಅವರು ಒಪ್ಪಂದದ ಹೊರತಾಗಿಯೂ ಬಿಸಿಸಿಐ ಸನ್ಮಾನ ಸಮಾರಂಭವನ್ನು ಆಯೋಜಿಸುತ್ತದೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. 16 ವರ್ಷ ಭಾರತೀಯ ಕ್ರಿಕೆಟ್‍ಗೆ ಅವರು ನೀಡಿದ ಕೊಡುಗೆಯನ್ನು ಗೌರವಿಸುವುದು ಬಿಸಿಸಿಐನ ಕರ್ತವ್ಯ ಎಂದು ಅಧಿಕಾರಿ ತಿಳಿಸಿದ್ದಾರೆ.
38 ವರ್ಷದ ಎಂ.ಎಸ್.ಧೋನಿ 2019ರ ವಿಶ್ವ ಕಪ್‍ನ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲನುಭವಿಸಿದ ಪಂದ್ಯದಲ್ಲಿ ಕೊನೆಯದಾಗಿ ಆಟವಾಡಿದ್ದರು. 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಧೋನಿ ಈವರೆಗೆ 350 ಏಕದಿನ ಹಾಗೂ 98 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಮುಂದಿನ ತಿಂಗಳು ಯುಎಇಯಲ್ಲಿ ಆರಂಭವಾಗಲಿರುವ ಐಪಿಎಲ್-2020ಯಲ್ಲಿ ಧೋನಿಯವರು ಆಡಲಿದ್ದಾರೆ.
350 ಏಕದಿನ ಪಂದ್ಯಗಳಲ್ಲಿ ಧೋನಿ 10,773 ರನ್‍ಗಳನ್ನು ಕಲೆ ಹಾಕಿದ್ದಾರೆ. 10 ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ, 73 ಅರ್ಧ ಶತಕ ಹೊಡೆದಿದ್ದಾರೆ. ಅಲ್ಲದೆ 98 ಟಿ-20 ಪಂದ್ಯಗಳಲ್ಲಿ 1,617 ರನ್‍ಗಳನ್ನು ಗಳಿಸಿದ್ದು, ಎರಡು ಅರ್ಧ ಶತಕ ಬಾರಿಸಿದ್ದಾರೆ.