ಮಡಿಕೇರಿ: ಧಾರೆ ಮುಹೂರ್ತ ಮುಗಿಸಿದ ವಧು ಕಲ್ಯಾಣ ಮಂಟಪದಿಂದ ನೇರವಾಗಿ ಮಡಿಕೇರಿಯ ಜ್ಯೂನಿಯರ್ ಕಾಲೇಜಿಗೆ ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದಾರೆ.
ಮಡಿಕೇರಿಯ ಅಶೋಕಪುರ ನಿವಾಸಿ ಸ್ವಾತಿ ಜೀವನ ಪರೀಕ್ಷೆ ಮುಗಿಸಿಕೊಂಡು ಕಲ್ಯಾಣ ಮಂಟಪದಿಂದ ನೇರವಾಗಿ ನಗರದ ಜೂನಿಯರ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿದ್ದಾರೆ. ವಿವಾಹ ದಿನಾಂಕಕ್ಕೂ ಮೊದಲು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದ ಸ್ವಾತಿ ಅವರಿಗೆ ಸುಂಟಿಕೊಪ್ಪದ ಮದುರಮ್ಮ ಪಟ್ಟಣದ ಸುರೇಶ್ ಅವರೊಂದಿಗೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಮದುವೆ ನಿಶ್ಚಯವಾಗಿತ್ತು.
ವಿಪರ್ಯಾಸವೆಂದರೆ ಪರೀಕ್ಷಾ ದಿನದಂದೇ ಧಾರೆ ಮುಹೂರ್ತಗಳು ಬಂದಿದ್ದವು. ಆದರೆ ಧೃತಿಗೆಡದೆ ಇಬ್ಬರ ಕುಟುಂಬದವರು ಸ್ವಾತಿ ಪರೀಕ್ಷೆಗೆ ಅಡ್ಡಿಯಾಗದಂತೆ ಬೆಳಗ್ಗೆ 6.30 ಗಂಟೆಯಿಂದ 9 ಗಂಟೆವರೆಗೆ ಇದ್ದಂತಹ ಶುಭಲಗ್ನದಲ್ಲಿ ಧಾರೆ ಮುಹೂರ್ತ ನಿಗದಿಪಡಿಸಿಕೊಂಡು ವಿವಾಹವನ್ನು ನೆರವೇರಿಸಿದ್ದಾರೆ
ಧಾರೆ ವಸ್ತ್ರದಲ್ಲೇ ಪರಿಕ್ಷಾ ಕೇಂದ್ರಕ್ಕೆ ಹಾಜರಾದರು. ಇಂತಹದ್ದೊಂದು ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಕುಟುಂಬದವರು ಧೈರ್ಯ ಹೇಳಿದ್ದರು. ನಾನೂ ಕೂಡ ಪರೀಕ್ಷೆಗೆ 9 ತಿಂಗಳಿಂದ ತಯಾರಾಗಿದ್ದೆ. ಪರೀಕ್ಷೆ ಬರೆಯುವ ಉದ್ದೇಶದಿಂದಲೇ ಮದುವೆ ಶಾಸ್ತ್ರಗಳನ್ನು ಸ್ವಲ್ಪ ಆತುರವಾಗಿಯೇ ಮುಗಿಸಿದ್ದೇವೆ. ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ನವವಧು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.