– ಮೈದುಂಬಿ ಹರಿಯುತ್ತಿರೋ ಜೀವನದಿಗಳು
ಉಡುಪಿ/ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್ ಬಾಳೂರು, ಚೆನ್ನಡ್ಲು, ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ಶುಕ್ರವಾರ ರಾತ್ರಿ ಹಾಗೂ ಶನಿವಾರ ರಾತ್ರಿಗೆ ಸುಮಾರು 114.2 ಮಿಲಿ ಮೀಟರ್ ನಷ್ಟು ಮಳೆ ಸುರಿದಿದೆ. ಇದರಿಂದ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಹಗಲಿರುಳೆನ್ನದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದಾಗಿ ಮಲೆನಾಡಿಗರು ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದ್ದು, ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದಂತಾಗಿದೆ. ಭಾರೀ ಮಳೆ, ಗಾಳಿಗೆ ಮಲೆನಾಡಿನ ಅಲ್ಲಲ್ಲೇ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ಕೆಲ ಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ.
ಮಲೆನಾಡಿನ ಧಾರಾಕಾರ ಮಳೆಯಿಂದಾಗಿ ನಾಡಿನ ಜೀವನದಿಗಳು ಮೈದುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಹುಟ್ಟಿ ನಾಡಿನಾದ್ಯಂತ ಹರಿಯುವ ಹೇಮಾವತಿ ಹಾಗೂ ತುಂಗಭದ್ರಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕುದುರೆಮುಖ ಹಾಗೂ ಕಳಸ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ ನದಿಯ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಕಳಸ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ. ಈ ಸೇತುವೆ ಮುಳುಗಡೆಯಾದರೆ ನಾಲ್ಕೈದು ಗ್ರಾಮಗಳು ಕಳಸ ಗ್ರಾಮದ ಸಂಪರ್ಕ ಕಳೆದುಕೊಳ್ಳುತ್ತವೆ. ಮಲೆನಾಡಿನ ಭಾರಿ ಮಳೆ ಗಾಳಿಗೆ ಅಲ್ಲಲ್ಲಿ ಮರಗಳು ಧರೆಗುರುಳಿದ ಸಣ್ಣಪುಟ್ಟ ಗುಡ್ಡಗಳು ಹಾಗೂ ಬಂಡೆಗಳು ಕುಸಿದು ಬಿದ್ದಿವೆ.
ಉಡುಪಿಯಲ್ಲಿ 90 ಮಿಲಿಮೀಟರ್ ಮಳೆ:
ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಸುಮಾರು 4.5ಲಕ್ಷ ರೂ. ಮೌಲ್ಯದ ಆಸ್ತಿ ಪಾಸ್ತಿ ಹಾನಿಗೀಡಾಗಿದೆ. ಎರಡು ಮನೆಗಳು ಸಂಪೂರ್ಣ ಕುಸಿದಿದ್ದು, ಏಳು ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮಧುಕರ ನಾಯಕ್ ಅವರ ವಾಸ್ತವ್ಯದ ಮನೆ ಸಂಪೂರ್ಣ ಹಾನಿಯಾಗಿದೆ. 3 ಲಕ್ಷ ರೂ. ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.
ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ ಗುಲಾಬಿ ಶೆಟ್ಟಿ ಅವರ ಮನೆ ಗಾಳಿ ಮಳೆಯಿಂದ ಸಂಪೂರ್ಣ ಕುಸಿದಿದ್ದು, 1.50 ಲಕ್ಷ ರೂ. ನಷ್ಟವಾಗಿದೆ. ಹಾವಂಜೆ ಗ್ರಾಮದ ಸುಂದರ ಪೂಜಾರಿ ಮನೆಗೆ ಭಾಗಶಃ ಹಾನಿಯಾಗಿ 60ಸಾವಿರ ರೂ., ಹಲುವಳ್ಳಿ ಗ್ರಾಮದ ಅನಂತ ಮರಕಾಲ ಹಾಗೂ ಕಾಡೂರು ಗ್ರಾಮದ ಸೀತಾರಾಮ ನಾಯ್ಕ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ ಸಂಭವಿಸಿ ತಲಾ 50 ಸಾವಿರ ರೂ. ಮತ್ತು ಹೊಸೂರು ಗ್ರಾಮದ ಶಾರದಾ ಬಾಯಿ ಅವರ ಮನೆಗೆ 20 ಸಾವಿರ ರೂ. ನಷ್ಟ ಉಂಟಾಗಿದೆ.
ಉಡುಪಿ ತಾಲೂಕಿನ ಮಣಿಪುರ ಗ್ರಾಮದ ಶಾಂತಲಕ್ಷ್ಮೀ ಅವರ ಮನೆಗೆ 22ಸಾವಿರ ರೂ. ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಕೆ.ಗೋಪ ಪೂಜಾರಿ ಅವರ ಮನೆಗೆ 30 ಸಾವಿರ ರೂ., ಅದೇ ಗ್ರಾಮದ ಉಷಾ ಮನೆಗೆ ಭಾಗಶಃ ಹಾನಿಯಾಗಿ 35 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಸುರಿದ ಭಾರೀ ಮಳೆಯಿಂದ ಕುಕ್ಕುಂದೂರು ಗ್ರಾಮದ ಭೋಜ ಸಾಲ್ಯಾನ್ ಅವರ ಬೆಳೆನಷ್ಟ ಉಂಟಾಗಿದೆ. ಇದರಿಂದ 30 ಸಾವಿರ ರೂ. ನಷ್ಟವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.