ಧಾರವಾಡ: ಕೃಷಿ ವಿವಿಯ ಗುತ್ತಿಗೆ ನೌಕರರ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣವನ್ನು ಸಿಐಡಿ ತನಿಖೆಗೆ ನಡೆಸಬೇಕೆಂದು ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.
ಜನವರಿ 31 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲ ನಡೆದ ಅಪಘಾತದಲ್ಲಿ, ಗುತ್ತಿಗೆ ಆಧಾರದ ಕೆಲಸ ಮಾಡುವ ಮಹಿಳಾ ನೌಕರರಿಬ್ಬರು ಮೃತ ಪಟ್ಟಿದ್ದರು. ರೇಖಾ ಕೊಕಟನೂರ ಹಾಗೂ ಮೇಘಾ ಸಿಂಗನಾಥ ಮೃತಪಟ್ಟಿರುವ ಹಿಂದೆ ಶಂಕೆ ಇದೆ ಎಂದು ಆರೋಪಿಸಿ ಮೃತರ ಕುಟುಂಬದವರು ಹಾಗೂ ಬಜರಂಗ ದಳದ ಕಾರ್ಯಕರ್ತರು ಧಾರವಾಡ ಕೃಷಿ ವಿವಿಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ ಇವರು, ರಜೆ ದಿನ ಇದ್ದಾಗ ವಿವಿ ಕುಲಪತಿ ಆಪ್ತ ಸಹಾಯಕ ಮನ್ಸೂರ ಮುಲ್ಲಾ ಹಾಗೂ ಯು ಬಿ ಮೇಸ್ತ್ರಿ ಎನ್ನುವವರು, ರೇಖಾ ಹಾಗೂ ಮೇಘಾಗೆ ಪುಸಲಾಯಿಸಿ ಉತ್ತರ ಕನ್ನಡ ಜಿಲ್ಲೆಗೆ ಕರೆದುದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಈ ಸಾವಿಗೆ ಕಾರಣರಾದ ಮುಲ್ಲಾ ಅವರಿಗೆ ವಜಾ ಮಾಡಬೇಕು ಎಂದು ಮನವಿ ಮಾಡಿದರು. ಬಾಗಲಕೋಟೆಗೆ ಹೋಗುವುದಾಗಿ ಮೃತ ಯುವತಿಯರು ಮನೆಯಲ್ಲಿ ಹೇಳಿದ್ದರು ಎಂದು ಮೃತ ರೇಖಾ ಸಹೋದರ ಹೇಳಿದ್ದಾರೆ.
ವಿವಿಯಿಂದ ಯಾವುದೇ ಕೆಲಸದಿಂದ ಅವರು ಹೋಗಿರಲಿಲ್ಲ, ಆ ದಿನ ರಜೆ ಇದ್ದ ಕಾರಣ, ವಿವಿಯ ವಾಹನ ಸಹ ಬಳಕೆಯಾಗಿಲ್ಲ, ಕುಟುಂಬಸ್ಥರ ಪರಿಹಾರ ಬೇಡಿಕೆ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವದಾಗಿ ಕೃಷಿ ವಿವಿಯ ಕುಲಪತಿ ಎಂ ಬಿ ಚೇಟ್ಟಿ ಹೇಳಿದ್ದಾರೆ.