– ಪ್ರತಿ ಬಾರಿಯೂ ಪರಕೀಯರೇ ನಮ್ಮ ಉಸ್ತುವಾರಿಯಾಗುತ್ತಾರೆ, ನಮ್ಮ ಹಣೆಬರಹ
ಚಿಕ್ಕಮಗಳೂರು: ದತ್ತಪೀಠದ ವಿಷಯ ಇಟ್ಟುಕೊಂಡು ಧರ್ಮವನ್ನ ಒಡೆದು, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದೀರಾ, ಮುಂದಕ್ಕೂ ಅದೇ ತಪ್ಪು ಮಾಡಬೇಡಿ ಎಂದು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಬಿಜೆಪಿ ಮುಖ್ಯಮಂತ್ರಿ ಬೊಮ್ಮಾಯಿಗೆ ಸಲಹೆ ನೀಡಿದ್ದಾರೆ.
ಮಂತ್ರಿಮಂಡಲ ರಚನೆಯಾಗುತ್ತಿದ್ದಂತೆ ಸ್ವಯಂ ವಿಡಿಯೋ ಮಾಡಿರೋ ಶಾಸಕ ರಾಜೇಗೌಡ ಸಿಎಂ ಸಲಹೆ ನೀಡಿ, ಮನವಿ ಮಾಡಿ ಬಿಜೆಪಿ ವಿರುದ್ಧ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅತಿ ಹೆಚ್ಚು ರೆವಿನ್ಯೂ ಕೊಡುವ ಜಿಲ್ಲೆ. ಜಿಲ್ಲೆಗೆ ಮಂತ್ರಿ ಸ್ಥಾನ ನೀಡಲು ವಿಳಂಬವಾಗುತ್ತಿದೆ. ಮೂರು ಬಾರಿ ಗೆದ್ದ ಕುಮಾರಸ್ವಾಮಿ, ಸಿ.ಟಿ.ರವಿ, ಬಯಲುಸೀಮೆ ಭಾಗದ ಇಬ್ಬರು ಶಾಸಕರಿದ್ದರು. ಯಾರಿಗೂ ನೀಡದೆ ಇರುವುದನ್ನ ಗಮನಿಸಿದರೆ, ಜಿಲ್ಲೆಯನ್ನ ಕಡೆಗಣಿಸಿದ್ದಾರೆ ಎಂಬುದು ನಮ್ಮ ಭಾವನೆ ಎಂದಿದ್ದಾರೆ.
ಜಿಲ್ಲೆಗೆ ಪ್ರತಿ ಬಾರಿಯೂ ಪರಕೀಯರೆ ಉಸ್ತುವಾರಿ ಸಚಿವರಾಗುತ್ತಾರೆ, ನಮ್ಮ ಹಣೆಬರಹ ಮಲೆನಾಡ ಜಿಲ್ಲೆಗೂ ಪ್ರಾತಿನಿದ್ಯ ಕೊಡಬೇಕಿತ್ತು. ನಮ್ಮನ್ನ ಎಲ್ಲದಕ್ಕೂ ಬಳಸಿಕೊಳ್ಳುತ್ತಾರೆ. ಅದಕ್ಕೆ ತಕ್ಕ ಫಲ ನೀಡುವುದಿಲ್ಲ ಎಂದಿದ್ದಾರೆ. ಯಡಿಯೂರಪ್ಪನವರು ಪಕ್ಷಪಾತ ಮಾಡಿದ್ದರು. ನೀವು ಅದನ್ನ ಮಾಡಬೇಡಿ. ಎಲ್ಲಾ ಶಾಸಕರು ಒಂದೇ ಎಂದಿದ್ದಾರೆ. ಯಾರಿಗೂ ತಾರತಮ್ಯ ಮಾಡದಂತೆ ಎಲ್ಲರನ್ನೂ ಒಂದೇ ರೀತಿ ನೋಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: 3ನೇ ಬಾರಿಯೂ ಕೈತಪ್ಪಿದ ಸಚಿವ ಸ್ಥಾನ – ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಕುಮಾರಸ್ವಾಮಿ
ಬಿಜೆಪಿ ಶಾಸಕರಿಗೆ ಹೆಚ್ಚು ಒತ್ತು ನೀಡಬೇಕೆಂದರೆ ನಿಮ್ಮ ವಿವೇಚನಾ ನಿಧಿಯಲ್ಲಿ ಏನೂ ಬೇಕಾದರಿ ಮಾಡಿ, ನಾವು ಪ್ರಶ್ನೆ ಮಾಡುವುದಿಲ್ಲ. ಆದರೆ, ಬೇರೆ ಯೋಜನೆಯಲ್ಲಿ ಎಲ್ಲರನ್ನೂ ಒಂದೇ ರೀತಿ ಕಾಣಿ, ಆಗ ನಿಮಗೂ ಒಳ್ಳೆ ಹೆಸರು ಬರಲಿದೆ ಎಂದಿದ್ದಾರೆ. ಬಿಜೆಪಿ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ಯಾವಾಗಲೂ ವಿಳಂಬ ಮಾಡುತ್ತಾರೆ. ಜನ ಅತಿವೃಷ್ಟಿ ಮತ್ತು ಕೊರೊನಾದಿಂದ ಸಂಕಷ್ಟಕ್ಕೀಡಾಗಿದ್ದಾರೆ. ತಡವಾಗಿಯಾದರೂ ಮಂತ್ರಿಗಳ ಆಯ್ಕೆ ಮಾಡಿ ಪ್ರಮಾಣ ವಚನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ವಿಚಾರ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಭಾಗದಲ್ಲಿ ಅತಿವೃಷ್ಟಿಯಿಂದ ತುಂಬಾ ಹಾನಿಯಾಗಿದೆ. ಸೇತುವೆಗಳು, ರಸ್ತೆಗಳು ಕೊಚ್ಚಿ ಹೋಗಿವೆ. ಹೊಲಗದ್ದೆಗಳಲ್ಲಿ ಮರಳು ಮಣ್ಣು ಮುಚ್ಚಿ ನೂರಾರು ಎಕರೆ ಗದ್ದೆ ನಾಶವಾಗಿದೆ. ಇದರ ಬಗ್ಗೆ ಕೂಡಲೇ ಗಮನ ಹರಿಸಿ ಹಣ ಬಿಡುಗಡೆ ಮಾಡಿ ತುರ್ತು ಕ್ರಮ ವಹಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.