ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹುಟ್ಟಿದ ಆನೆ ಮರಿಗೆ ಇಂದು ನಾಮಕರಣ ಮಾಡಲಾಯಿತು. ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮೊಮ್ಮಗಳು ಮಾನ್ಯ, ಶಿವಾನಿ ಹೆಸರು ಘೋಷಿಸುವ ಮೂಲಕ ನಾಮಕರಣ ಮಾಡಿದರು.
ಶ್ರೀಕ್ಷೇತ್ರದ ಆನೆ ಲಕ್ಷ್ಮೀ ಕಳೆದ ಜುಲೈ1 ರಂದು ಹೆಣ್ಣು ಮರಿಗೆ ಜನ್ಮ ನೀಡಿತ್ತು. ಹೀಗಾಗಿ ಮರಿಯ ನಾಮಕರಣ ಇಂದು ತುಲಾ ಲಗ್ನ ಮುಹೂರ್ತದಲ್ಲಿ ನಡೆಯಿತು. ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ವಿಧಿ ನೆರವೇರಿಸಿದರು. ಇದೇ ವೇಳೆ ಆನೆಯ ಮಾವುತ ಕೃಷ್ಣ ಅವರಿಗೆ ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಸನ್ಮಾನ ಮಾಡಿದರು.
ನಾಮಕರಣ ಸಮಾರಂಭದಲ್ಲಿ ಹೇಮಾವತಿ ವಿ ಹೆಗ್ಗಡೆ, ಡಿ ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ, ಸೋನಿಯಾ ವರ್ಮಾ, ಅಮಿತ್, ಶ್ರದ್ಧಾ ಅಮಿತ್, ವೀರು ವಿ ಶೆಟ್ಟಿ, ದೇವಳದ ಶ್ರೀ ದೇವಳದ ಪಾರುಪತ್ಯಗಾರ ಪಿ ಲಕ್ಷ್ಮೀನಾರಾಯಣ ರಾವ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.