ಮಂಗಳೂರು: ಕೊರೊನಾ ಮಹಾಮಾರಿಯ ಅಟ್ಟಹಾಸವು ನಮ್ಮ ವೈದ್ಯಕೀಯ ಕ್ಷೇತ್ರದ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಜೊತೆಗೆ ಈ ಸಂಕಷ್ಟದ ಸಮಯದಲ್ಲೂ ಜನರ ರಕ್ತ ಹೀರುವ ಮಂದಿಯ ಪರಿಚಯವನ್ನು ಮಾಡಿಸಿದೆ. ಬಡಜನರ ನೆರವಿಗೆ ಯಾವ ವೈದ್ಯರು, ಆಸ್ಪತ್ರೆಗಳೂ ಇಲ್ಲ ಎನ್ನುವ ಹತಾಶಾ ಮನೋಭಾವನೆ ಎಲ್ಲರನ್ನೂ ಆವರಿಸುತ್ತಿರುವಂತೆ ಅಲ್ಲೊಂದು, ಇಲ್ಲೊಂದು ಸಹೃದಯವಂತ ವೈದ್ಯರು, ಅಧಿಕಾರಿಗಳು ದೀಪಗಳಂತೆ ಗೋಚರಿಸುತ್ತಾರೆ.ಅಂತಹ ಮಾನವೀಯ ಮುಖವುಳ್ಳ ಅಧಿಕಾರಿಗಳ ಪೈಕಿ ಒಬ್ಬರು, ದಕ್ಷಿಣ ಕನ್ನಡ ಜಿಲ್ಲೆಯ ಆಯುಷ್ಮಾನ್ ನೋಡಲ್ ಅಧಿಕಾರಿ ಡಾ. ರತ್ನಾಕರ್.
Advertisement
ಹೌದು, ಡಾ. ರತ್ನಾಕರ್ ಅವರು ಇಂದಿನ ಸಂಕಷ್ಟದ ಸಂದರ್ಭದಲ್ಲಿ, ಬಡವರ್ಗದ ಮಂದಿಗೆ ಆಶಾಕಿರಣವಾಗಿದ್ದಾರೆ.ಖಾಸಗಿ ಆಸ್ಪತ್ರೆಗಳ ಐಸಿಯು, ವೆಂಟಿಲೇಟರ್ ಬೆಡ್‍ಗಳಲ್ಲಿ ಮಲಗಿರುವ ಬಡ ರೋಗಿಗಳ ಕುಟುಂಬಿಕರು ಲಕ್ಷಾಂತರ ರೂಪಾಯಿ ಬಿಲ್‍ಗಳನ್ನು ಕಂಡು ಕುಸಿದು ಕೂತಾಗ ಅಂತವರ ನೆರವಿಗೆ ಧಾವಿಸಿ ಬಿಲ್‍ಗಳನ್ನು ಕಡಿಮೆಗೊಳಿಸುವುದು, ಲಕ್ಷಾಂತರ ರೂಪಾಯಿ ದುಬಾರಿ ಬಿಲ್ ಗಳ ಕುರಿತು ದೂರುಗಳನ್ನು ಪರಿಶೀಲಿಸಿ ನಿಯಮ ಮೀರಿ ಹಾಕಿದ ಬಿಲ್ ಮೊತ್ತಗಳನ್ನು ವಾಪಾಸ್ ಕೊಡಿಸುವುದು, ಲಕ್ಷಾಂತರ ಮೊತ್ತದಾಟಿದ ತೀರಾ ಬಡ ರೋಗಿಗಳ ಬಿಲ್‍ಗಳನ್ನು ಆಯುಷ್ಮಾನ್ ಅಡಿ ತಂದು ಬಚಾವ್ ಮಾಡುವುದು ಮುಂತಾದ ಕೆಲಸಗಳನ್ನು ಚಾಕಚಕ್ಯತೆಯಿಂದ ಮಾಡಿ ಕೊರೋನ ರೋಗಿಗಳ ಪಾಲಿಗೆ ಆಪತ್ಭಾಂಧವ ಆಗಿದ್ದಾರೆ.
Advertisement
Advertisement
ಡಾ. ರತ್ನಾಕರ್ ಅವರು ಮೂಲತಃ ಕುಂದಾಪುರದವರು. ಬೆಂಗಳೂರಿನ ಪ್ರತಿಷ್ಠಿತ ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ದುಡಿದು ನಂತರ ಆರೋಗ್ಯ ಇಲಾಖೆಯ ಸೇವೆಗೆ ಸೇರಿದವರು. ಡಾ. ನೌಷಾದ್, ಡಾ. ಯಶಸ್ವಿನಿ, ಜಗನ್ನಾಥ್ ಇವರನ್ನೊಳಗೊಂಡ ತಂಡದ ಜೊತೆಗೆ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಕೊರೊನಾ ಎರಡನೇ ಅಲೆಯ ತೀವ್ರತೆಯ ಈ ಸಂದರ್ಭದಲ್ಲಿ ಪ್ರತಿಯೊಂದು ಫೋನ್ ಕರೆಯನ್ನು ಸ್ವೀಕರಿಸುತ್ತಾ ಹಗಲು ರಾತ್ರಿ ದುಡಿಯುತ್ತಿದ್ದಾರೆ.
Advertisement
ವೈದ್ಯಕೀಯ ಲೋಕದ ಲಾಬಿಯು ಇಡೀ ಆಡಳಿತ ವ್ಯವಸ್ಥೆಯನ್ನೇ ಬುಡ ಮೇಲುಗೊಳಿಸುವಷ್ಟು ಬಲಾಢ್ಯವಾಗಿರುವಾಗ ಅಧಿಕಾರಿಗಳಿಂದ ಪೂರ್ಣ ನ್ಯಾಯ, ಕಾನೂನಿನ ಪಾಲನೆ ನಿರೀಕ್ಷಿಸುವುದು ಅಸಾಧ್ಯವೇ ಸರಿ. ಇದೆಲ್ಲ ಸವಾಲುಗಳನ್ನು ಮೀರಿನಿಂತು ಕೆಲಸ ಮಾಡುತ್ತಿರುವ ಡಾ. ರತ್ನಾಕರ್ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ಮೆಚ್ಚುಗೆಯ ಬರಹಗಳೂ ಮೂಡಿಬರುತ್ತಿವೆ.ಇಂತಹ ಅಧಿಕಾರಿಗಳು ಎಲ್ಲೆಡೆ ಬರುವಂತಾಗಲಿ ಎನ್ನುವುದೇ ಬಡ, ಅಸಹಾಯಕ ಮಂದಿಯ ಆಶಯವಾಗಿದೆ.