ನವದೆಹಲಿ: ಜಿಯೋ ಸ್ಥಾಪಿಸಿ ಟೆಲಿಕಾಂ ಕ್ಷೇತ್ರದದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಈಗ ಕಡಿಮೆ ಬೆಲೆಗೆ ಗುಣಮಟ್ಟದ ಸ್ಮಾರ್ಟ್‌ಫೋನ್ ತಯಾರಿಸಲು ದೇಶೀಯ ಫೋನ್ ತಯಾರಕಾ ಕಂಪನಿಯನ್ನು ಖರೀದಿಸಲು ಮುಂದಾಗಿದೆ.
ಹೌದು. ಈ ವರ್ಷ ನಡೆದ ರಿಲಯನ್ಸ್ ಇಂಡಸ್ಟ್ರೀಸ್‌ನ 43ನೇ ವಾರ್ಷಿಕ ಸಭೆಯಲ್ಲಿ ಮುಖ್ಯಸ್ಥ ಮುಕೇಶ್ ಅಂಬಾನಿ ಗೂಗಲ್ ಜೊತೆಗೂಡಿ ಕಡಿಮೆ ಬೆಲೆಗೆ ಫೋನ್ ತಯಾರಿಸುತ್ತೇವೆ ಎಂದು ಘೋಷಿಸಿದ್ದರು. ಇದಾದ ನಂತರ ಈ ವಿಚಾರದ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿರಲಿಲ್ಲ. ಆದರೆ ಈಗ ಸ್ಥಳೀಯ ಮೊಬೈಲ್ ತಯಾರಕಾ ಕಂಪನಿಯನ್ನು ಖರೀದಿಸಲು ಮಾತುಕತೆ ನಡೆಯುತ್ತಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
Advertisement
ಯುನೈಟೆಡ್ ಟೆಲಿಲಿಂಕ್ಸ್ ಕಂಪನಿಯನ್ನು ಖರೀದಿಸಲು ಮಾತುಕತೆ ನಡೆದಿದೆ ಎಂದು ವರದಿಯಾಗಿದೆ. ಯನೈಟೆಡ್ ಟೆಲಿಲಿಂಕ್ಸ್ ಮತ್ತು ಜೈನಾ ಮಾರ್ಕೆಟಿಂಗ್ ಕಂಪನಿ ಜೊತೆಯಾಗಿ ಕಾರ್ಬನ್ ಫೋನ್ ತಯಾರಿಸುತ್ತಿದೆ. ಇದನ್ನೂ ಓದಿ: ತಿಂಗಳಿಗೆ 160 ರೂ.ಗೆ 16 ಜಿಬಿ ಡೇಟಾ ಸಿಗುತ್ತಿರುವುದು ದುರಂತ – ಏರ್‌ಟೆಲ್ ಮುಖ್ಯಸ್ಥ
Advertisement
Advertisement
ಭಾರತವನ್ನು ಮೊಬೈಲ್ ಉತ್ಪಾದನಾ ಹಬ್ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‌ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಹಲವು ಕಂಪನಿಗಳು ಆಯ್ಕೆಯಾಗಿದ್ದು ಈ ಪೈಕಿ ಯುನೈಟೆಡ್ ಟೆಲಿಲಿಂಕ್ಸ್ ಕಂಪನಿ ಒಂದಾಗಿದೆ.
Advertisement
ಮೂಲಗಳ ಪ್ರಕಾರ ಮಾತುಕತೆ ಬಹುತೇಕ ಪೂರ್ಣವಾಗಿದ್ದು ಶೀಘ್ರವೇ ಅಂತಿಮವಾಗುವ ಸಾಧ್ಯತೆಯಿದೆ. ಈ ಬಗ್ಗೆ ರಿಲಯನ್ಸ್ ಕಂಪನಿ ಬಳಿ ಪ್ರತಿಕ್ರಿಯೆ ಕೇಳಿದ್ದಕ್ಕೆ ಯಾವುದೇ ಉತ್ತರ ನೀಡಿಲ್ಲ.
ಜುಲೈನಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, ದೇಶದ ಪ್ರತಿಯೊಬ್ಬ ಪ್ರಜೆ ಸ್ಮಾರ್ಟ್ ಸಾಧನವನ್ನು ಬಳಸುವಂತಾಗಲು ನಾವು ಕಡಿಮೆ ಬೆಲೆಯಲ್ಲಿ ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫೋನ್ ನಿರ್ಮಾಣ ಮಾಡುತ್ತೇವೆ. ಈ ವೇಳೆ ಭಾರತವನ್ನು 2ಜಿ ಮುಕ್ತ ಮಾಡಿ ಕಡಿಮೆ ಬೆಲೆಯಲ್ಲಿ 4ಜಿ ಅಥವಾ 5ಜಿ ಆಂಡ್ರಾಯ್ಡ್ ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದರು.
ಜಿಯೋ ಹೂಡಿಕೆಯ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದಿದ್ದ ಗೂಗಲ್ ಮುಂದಿನ 5-7 ವರ್ಷದ ಒಳಗಡೆ 10 ಶತಕೋಟಿ ಡಾಲರ್(75 ಸಾವಿರ ಕೋಟಿ ರೂ.) ಹಣವನ್ನು ಹೂಡಿಕೆ ಮಾಡುವ ಭಾಗವಾಗಿ ಜಿಯೋ ಕಂಪನಿಯಲ್ಲಿ 33,737 ಕೋಟಿ ರೂ.(4.5 ಶತಕೋಟಿ ಡಾಲರ್) ಹಣವನ್ನು ಹೂಡಿಕೆ ಮಾಡುತ್ತಿರುವಾಗಿ ತಿಳಿಸಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಜಿಯೋದಲ್ಲಿ ಶೇ.67.03ರಷ್ಟು ಷೇರುಗಳನ್ನು ಹೊಂದಿದೆ.
ಕಡಿಮೆ ಬೆಲೆಯಲ್ಲಿ ಫೋನ್ ಹೇಗೆ?
ಜಿಯೋದಲ್ಲಿ ಈಗಾಗಲೇ ಚಿಪ್ ತಯಾರಕ ಕಂಪನಿಗಳಾದ ಕ್ವಾಲಕಂ ಮತ್ತು ಇಂಟೆಲ್ ಹೂಡಿಕೆ ಮಾಡಿದೆ. ಹೀಗಾಗಿ ಹಾರ್ಡ್‌ವೇರ್ ವಿಚಾರದಲ್ಲಿ ಫೋನ್ ತಯಾರಿಕೆಗೆ ಈ ಹೂಡಿಕೆ ನೆರವಾಗಬಹುದು. ಆಪರೇಟಿಂಗ್ ಸಿಸ್ಟಂ ವಿಚಾರದಲ್ಲಿ ಗೂಗಲ್ ಹೇಗೂ ಸಹಾಯ ಮಾಡುತ್ತದೆ ಎಂದು ಈಗಾಗಲೇ ಹೇಳಿದೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಡೇಟಾ ಕ್ರಾಂತಿ ಮಾಡಿದಂತೆ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜಿಯೋ ಕ್ರಾಂತಿ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.
ಜಿಯೋದಲ್ಲಿ ಯಾರ ಹೂಡಿಕೆ ಎಷ್ಟಿದೆ?
ಫೇಸ್‌ಬುಕ್ – 43,574.62 ಕೋಟಿ ರೂ.(ಶೇ.9.99)
ಸಿಲ್ವರ್ ಲೇಕ್ ಪಾರ್ಟ್‌ನರ್ಸ್ 5,655.75 ಕೋಟಿ ರೂ.(ಶೇ.1.15)
ವಿಸ್ತಾ ಇಕ್ವಿಟಿ ಪಾರ್ಟ್‌ನರ್ಸ್ 11,367 ಕೋಟಿ ರೂ.(ಶೇ.2.32)
ಜನರಲ್ ಅಟ್ಲಾಂಟಿಕ್ – 6,598.38 ಕೋಟಿ ರೂ.(ಶೇ.1.34)
ಕೆಕೆಆರ್ – 11,367 ಕೋಟಿ ರೂ.(ಶೇ.2.32)
ಮುಬಡಾಲ – 9,093.60 ಕೋಟಿ ರೂ.(ಶೇ.1.85)
ಸಿಲ್ವರ್ ಲೇಕ್ ಪಾರ್ಟನರ್ ಮತ್ತಷ್ಟು ಹೂಡಿಕೆ – 4,546.80 ಕೋಟಿ ರೂ. (ಶೇ.0.93)
ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿ – 5,683.50 ಕೋಟಿ ರೂ.(ಶೇ.1.16 )
ಟಿಪಿಜಿ – 4,546.8 ಕೋಟಿ ರೂ.(ಶೇ.93)
ಎಲ್ ಕಟ್ಟರ್‌ಟನ್ – 1,894 ಕೋಟಿ ರೂ.(ಶೇ.0.39)
ಪಿಐಎಫ್ – 11,367 ಕೋಟಿ ರೂ.(ಶೇ.2.32)
ಇಂಟೆಲ್ – 1,894.5 ಕೋಟಿ ರೂ.(ಶೇ.0.39)
ಕ್ವಾಲಕಂ – 730 ಕೋಟಿ ರೂ.(ಶೇ.0.15)
ಗೂಗಲ್ – 33,737 ಕೋಟಿ ರೂ.(ಶೇ.7.7)