ನವದೆಹಲಿ: ಹರ್ಯಾಣ ಪಂಚಕುಲ ಜಿಲ್ಲೆಯ ಎರಡು ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಪಕ್ಷಿ ಜ್ವರ ಬಂದಿರುವುದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಂಕು ನಿಯಂತ್ರಣ ಮತ್ತು ತಡೆಗಟ್ಟುವ ಉದ್ದೇಶದಿಂದ 9 ತ್ವರಿತ ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಿದೆ.
ಗುಜರಾತ್‍ನ ಸೂರತ್ ಮತ್ತು ರಾಜಸ್ಥಾನದ ಸಿರೋಹಿ ಜಿಲ್ಲೆಗಳಲ್ಲಿ ಕಾಗೆ ಮತ್ತು ಕಾಡು ಹಕ್ಕಿಗಳ ಮಾದರಿಗಳಲ್ಲೂ ಸಹ ಪಕ್ಷಿಜ್ವರ (ಎಚ್-5) ಸೋಂಕು ಪತ್ತೆಯಾಗಿದೆ. ಈ ಎರಡೂ ರಾಜ್ಯಗಳಲ್ಲೂ ಸೋಂಕು ನಿಯಂತ್ರಣ ಕ್ರಮಗಳು ಪ್ರಗತಿಯಲ್ಲಿದೆ.
Advertisement
ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿ 86 ಕಾಗೆಗಳು ಮತ್ತು ಎರಡು ಬಾತು ಕೋಳಿಗಳು ಕೂಡ ಅಸಹಜ ಸಾವಿಗೀಡಾಗಿವೆ. ನಹಾನ್, ಬಿಲಾಸ್ ಪುರ್ ಮತ್ತು ಮಂಡಿಯಲ್ಲಿ ಕಾಡು ಹಕ್ಕಿಗಳ ಅಸಹಜ ಸಾವು ಸಂಭವಿಸಿದೆ. ಇವುಗಳ ಮಾದರಿಗಳನ್ನು ಪರೀಕ್ಷೆಗಾಗಿ ನಿಯೋಜಿತ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
Advertisement
Advertisement
ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಬಾಧಿತ ರಾಜ್ಯಗಳಿಗೆ ಈಗಾಗಲೇ ಕೇಂದ್ರದಿಂದ ಸೂಚನೆಗಳನ್ನು ನೀಡಲಾಗಿದೆ. ಈ ವರೆಗೆ ಪಕ್ಷಿ ಜ್ವರದ ಸೋಂಕು ಏಳು ರಾಜ್ಯಗಳಾದ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಖಚಿತಪಟ್ಟಿದೆ. ಪಕ್ಷಿಗಳ ಮಾದರಿಗಳ ಪರೀಕ್ಷಾ ವರದಿಗಳನ್ನು ದೆಹಲಿ ಮತ್ತು ಮಹಾರಾಷ್ಟ್ರದ ನಿಯೋಜಿತ ಪ್ರಯೋಗಾಲಯಗಳಿಗೆ ರವಾನಿಸಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ.
Advertisement
ಚತ್ತೀಸ್‍ಗಡದ ಬಲೋದ್ ಜಿಲ್ಲೆಯಲ್ಲಿ ಕಾಡು ಹಕ್ಕಿಗಳ ಮಾದರಿಯಲ್ಲಿ ಯಾವುದೇ ಸೋಂಕು ದೃಢಪಟ್ಟಿಲ್ಲ. ಕೇರಳದಲ್ಲಿ ಪಕ್ಷಿ ಜ್ವರ ದೃಢಪಟ್ಟು ಬಾಧಿತವಾಗಿರುವ ಎರಡು ಜಿಲ್ಲೆಗಳಲ್ಲಿ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯ ಪೂರ್ಣಗೊಂಡಿದೆ ಮತ್ತು ಕೇರಳದಲ್ಲಿ ಕಾರ್ಯಾಚರಣೆಯ ನಂತರದ ಕಣ್ಗಾವಲು ಕಾರ್ಯಕ್ರಮದ ಮಾರ್ಗಸೂಚಿ ಹೊರಡಿಸಲಾಗಿದೆ.
ದೇಶದಲ್ಲಿ ಪಕ್ಷಿ ಜ್ವರ ಬಾಧಿತ ಪ್ರದೇಶಗಳಲ್ಲಿ ಇರುವ ಪರಿಸ್ಥಿತಿ ಅವಲೋಕಿಸಲು ಕೇಂದ್ರ ತಂಡಗಳು ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ. ಮತ್ತೊಂದೆಡೆ ಕೇಂದ್ರ ತಂಡಗಳು ಜನವರಿ 9 ರಂದು ಕೇರಳ ತಲುಪಿವೆ ಮತ್ತು ಸಂಕ್ರಾಮಿಕ ರೋಗ ಕಂಡು ಬಂದಿರುವ ಪ್ರದೇಶಗಳಲ್ಲಿ ಪರೀಕ್ಷಿಸುತ್ತಿದೆ. ಇನ್ನೊಂದು ಕೇಂದ್ರ ತಂಡ ಜನವರಿ 10 ರಂದು ಹಿಮಾಚಲ ಪ್ರದೇಶಕ್ಕೆ ತಲುಪಿದೆ ಮತ್ತು ಅಲ್ಲಿನ ರೋಗ ಬಾಧಿತ ಪ್ರದೇಶಗಳಲ್ಲಿ ಸಮೀಕ್ಷೆಯಲ್ಲಿ ನಿರತವಾಗಿದೆ.
ಪಕ್ಷಿ ಜ್ವರದ ಬಗ್ಗೆ ತಪ್ಪು ಮಾಹಿತಿ ಹರಡದಂತೆ ನೋಡಿಕೊಳ್ಳಬೇಕು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಲ ಮೂಲಗಳು, ಜೀವಂತ ಹಕ್ಕಿಗಳಿರುವ ಮಾರುಕಟ್ಟೆಗಳು, ಮೃಗಾಲಯ, ಕೋಳಿಸಾಕಾಣಿಕೆ ಕೇಂದ್ರಗಳು, ಮತ್ತಿತರ ಪ್ರದೇಶಗಳ ಆಸು ಪಾಸಿನಲ್ಲಿ ಕಣ್ಗಾವಲು ಹೆಚ್ಚಿಸಬೇಕು. ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಸೂಕ್ತ ರೀತಿಯಲ್ಲಿ ವಿಲೇವಾರಿ ವ್ಯವಸ್ಥೆ ಮಾಡುವ ಜತೆಗೆ ಜೈವಿಕ ಸುರಕ್ಷತೆಯನ್ನು ಬಲಗೊಳಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.