– ಕಾಸರಗೋಡು ಜಿಲ್ಲೆಯ ಪರಿಸ್ಥಿತಿ ಗಂಭೀರವಾಗಿದೆ
– ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು
ಕಾಸರಗೋಡು: ದೇಶದ ಮಾಡೆಲ್ ಜಿಲ್ಲೆ ಎಂದು ಖ್ಯಾತಿ ಪಡೆದಿದ್ದ ಕಾಸರಗೋಡಿನಲ್ಲೂ ಮತ್ತೆ ಕೊರೊನಾ ಹಾವಳಿ ಜೋರಾಗಿದೆ. ಮೂರನೇ ಹಂತದ ಹರಡುವಿಕೆಯಲ್ಲಿ ಜುಲೈ 15ರವರೆಗೆ 590 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 768 ಜನರಿಗೆ ಸೋಂಕು ತಗುಲಿದೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್-19 ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದೆ ಮತ್ತು ಜಿಲ್ಲೆಯಲ್ಲಿ ಸಂಪರ್ಕದ ಮೂಲಕ ಹೆಚ್ಚಿನ ಜನರು ಸೋಂಕಿಗೆ ಒಳಗಾಗುತ್ತಿರುವುದು ಖಚಿತವಾಗುತ್ತಿರುವುದರಿಂದ ರೋಗ ಹರಡುವಿಕೆ ಹೆಚ್ಚುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೇಳಿದರು.
Advertisement
ವೆಂಟಿಲೇಟರ್ ಸಮಸ್ಯೆ: ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೊರೊನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವೆಂಟಿಲೇಟರ್ ಗಳ ಸಂಖ್ಯೆ ಕಡಿಮೆ. ಪರಿಸ್ಥಿತಿ ಹದಗೆಡುತ್ತಿದ್ದಂತೆ, ವಿಶ್ವದಾದ್ಯಂತ ಕೋವಿಡ್ ರೋಗಿಗಳು ಉಸಿರುಗಟ್ಟುವಿಕೆಯಿಂದ ಸಾಯಬಹುದು. ವೆಂಟಿಲೇಟರ್ ನಲ್ಲಿ ಪ್ರವೇಶ ಪಡೆದವರಿಗೆ ಗುಣಪಡಿಸುವ ಹಂತ ತುಂಬಾ ಕಡಿಮೆ. ಇದು ತೀವ್ರ ಎಚ್ಚರಿಕೆಯ ಸಮಯ. ಎಲ್ಲಾ ವಯಸ್ಸಿನ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಇದನ್ನು ಜನರು ಗಮನಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಜನರನ್ನು ಗುಂಪುಗೂಡಲು ಅನುಮತಿಸಲಾಗುವುದಿಲ್ಲ. ಅನಗತ್ಯ ಪ್ರಯಾಣಕ್ಕೂ ಅನುಮತಿ ಕೊಡುವುದಿಲ್ಲ. ಶಾರೀರಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಮಾಸ್ಕ್ ಅಥವಾ ಮುಖಗವಸು ಧರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
Advertisement
Advertisement
ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಅಂಗಡಿಗಳು ಓಪನ್: ಜಿಲ್ಲೆಯ ಅಂಗಡಿಗಳನ್ನು ಜುಲೈ 16ರಿಂದ ಬೆಳಿಗ್ಗೆ 8ರಿಂದ ಸಂಜೆ 6 ರವರೆಗೆ ಮಾತ್ರ ತೆರೆಯಲು ಅವಕಾಶವಿದೆ. ಸ್ವತಃ ವಾಣಿಜ್ಯ ಸಂಘಗಳ ಕೋರಿಕೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂಗಡಿ ನೌಕರರು ಕೈಗವಸುಗಳು, ಮುಖಗವಸುಗಳು ಧರಿಸಲೇ ಬೇಕು ಮತ್ತು ಸ್ಯಾನಿಟೈಸರ್ ಗಳನ್ನು ಬಳಸಬೇಕು. ಪಾಲಿಸದಿದ್ದಲ್ಲಿ, ಅಂಗಡಿಗಳನ್ನು ಏಳು ದಿನಗಳವರೆಗೆ ಮುಚ್ಚಲಾಗುತ್ತದೆ ಮತ್ತು ಬಳಿಕ ಸ್ಯಾನಿಟೈಸ್ ಮಾಡಿದ ನಂತರ ಮಾತ್ರ ತೆರೆಯಲು ಅವಕಾಶ ನೀಡುತ್ತೇವೆ ಎಂದು ಹೇಳಿದರು.
Advertisement
ಕುಂಬಳೆಯಿಂದ ತಲಪ್ಪಾಡಿ ರಾಷ್ಟ್ರೀಯ ಹೆದ್ದಾರಿ ಪ್ರದೇಶ ನಿಯಂತ್ರಣ ವಲಯಗಳು: ಕುಂಬಳೆಯಿಂದ ತಲಪ್ಪಾಡಿ, ಮಧೂರು ಪೇಟೆ ಮತ್ತು ಚೆರ್ಕಳ ಪೇಟೆವರೆಗಿನ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿರುವ ಪಟ್ಟಣಗಳು ಸೇರಿದ ಪ್ರದೇಶಗಳನ್ನು ಕಂಟೈನ್‍ಮೆಂಟ್ ಪ್ರದೇಶಗಳಾಗಿ ಜಿಲ್ಲಾ ಕಲೆಕ್ಟರ್ ಡಾ.ಡಿ.ಸಜಿತ್ ಬಾಬು ಘೋಷಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ರೋಗಿಗಳು ಮತ್ತು ರೋಗ ಹರಡುವ ಅಪಾಯ ಹೆಚ್ಚು ಇರುವ ಪ್ರದೇಶಗಳು ಇವು. ಕಂಟೈನ್‍ಮೆಂಟ್ ವಲಯಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗುವುದು. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಮಾತ್ರ ಪರ್ಯಾಯ ದಿನಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಇಲ್ಲಿ ತೆರೆಯಲು ಅವಕಾಶವಿರುತ್ತದೆ ಎಂದರು.
ಬ್ಯಾಂಕ್ ಓಪನ್ ಓಕೆ, ಗ್ರಾಹಕರು ಬಂದ್ರೆ ಜೋಕೆ!: ಬ್ಯಾಂಕುಗಳು ಕಂಟೋನ್ಮೆಂಟ್ ವಲಯಗಳಲ್ಲಿ ಕಾರ್ಯನಿರ್ವಹಿಸಬಹುದು. ಆದರೆ ಜನರನ್ನು ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಎಲ್ಲಾ ಸೇವೆಗಳನ್ನು ಆನ್‍ಲೈನ್‍ನಲ್ಲಿ ಮಾತ್ರ ಒದಗಿಸಬಹುದು. ಕಂಟೈನ್ಮೆಂಟ್ ವಲಯಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು. ಅನಗತ್ಯ ಪ್ರಯಾಣಕ್ಕೆ ಅವಕಾಶ ಇಲ್ಲ. ಈ ಆದೇಶದ ಉಲ್ಲಂಘನೆಯು ಕಠಿಣ ಕಾನೂನು ಕ್ರಮಕ್ಕೆ ಕಾರಣವಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
14 ದಿನ ಸರ್ಕಾರಿ ಕಚೇರಿಗಳ ಸಭೆ ಇಲ್ಲ: ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಎಲ್ಲಾ ಸಭೆಗಳನ್ನು 14 ದಿನಗಳವರೆಗೆ ಸ್ಥಗಿತಗೊಳಿಸಲು ಜಿಲ್ಲಾ ಮಟ್ಟದ ಕರೋನಾ ಕೋರ್ ಸಮಿತಿ ಸಭೆ ನಿರ್ಧರಿಸಿತು. ವಿಚಾರಣೆಗಳು ಸೇರಿದಂತೆ ಎಲ್ಲಾ ಜಿಲ್ಲಾ ಸಭೆಗಳನ್ನು 14 ದಿನಗಳವರೆಗೆ ಮುಂದೂಡಲಾಗಿದೆ.
ಸಾರ್ವಜನಿಕ ಸಾರಿಗೆಗೆ ಜುಲೈ 17 ರಿಂದ ನಿರ್ಬಂಧ: ಕೋವಿಡ್ ರೋಗ ಹರಡುವುದನ್ನು ನಿಯಂತ್ರಿಸುವ ಭಾಗವಾಗಿ, ಜುಲೈ 17 ರಿಂದ ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲು ಜಿಲ್ಲೆ ನಿರ್ಧರಿಸಿದೆ. ಕೆಎಸ್‍ಆರ್ ಟಿಸಿ ಬಸ್‍ಗಳು ಅಥವಾ ಖಾಸಗಿ ಬಸ್‍ಗಳು ಓಡಾಟ ನಡೆಸುವಂತಿಲ್ಲ. ಕರ್ನಾಟಕದಿಂದ ಕಾಸರಗೋಡು ಜಿಲ್ಲೆಗೆ ತರಕಾರಿ ವಾಹನಗಳಿಗೆ ಅವಕಾಶ ಇಲ್ಲ. ಹಣ್ಣು ಮತ್ತು ತರಕಾರಿ ವಾಹನಗಳನ್ನು ಕರ್ನಾಟಕದಿಂದ ಜುಲೈ 31 ರವರೆಗೆ ಜಿಲ್ಲೆಗೆ ಪ್ರವೇಶಿಸಲು ಬಿಡುವುದಿಲ್ಲ. ಈಗಾಗಲೇ ದೈನಂದಿನ ಪಾಸ್ ರದ್ದುಗೊಂಡಿದೆ. ಕರ್ನಾಟಕದಿಂದ ತರಕಾರಿ ವಾಹನಗಳ ನಿರ್ಬಂಧದೊಂದಿಗೆ, ಜಿಲ್ಲೆಯಲ್ಲಿ ತರಕಾರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತರಕಾರಿಗಳನ್ನು ಕೃಷಿ ಇಲಾಖೆಯ ಮೂಲಕ ರೈತರಿಂದ ಸಂಗ್ರಹಿಸಿ ಮಾರಾಟ ಮಾಡಲಾಗುತ್ತದೆ.
ಹಿಂದಿರುಗಿದ ವಲಸಿಗರಿಗೆ ಕೋವಿಡ್ ಪರೀಕ್ಷೆಗೆ ಸೌಲಭ್ಯ: ಹಿಂದಿರುಗಿದ ವಲಸಿಗರಿಗೆ ಕೋವಿಡ್ ಪರೀಕ್ಷೆಗಳಿಗಾಗಿ ಕಣ್ಣೂರು ಜಿಲ್ಲೆಯ ಎರಡು ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ.
ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕ ಪ್ರವೇಶವಿಲ್ಲ: ಜಿಲ್ಲಾ ಪಂಚಾಯತ್ ಕಚೇರಿಗಳು ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದಿಲ್ಲ. ಅಧಿಕಾರಿಗಳು ಆನ್‍ಲೈನ್‍ನಲ್ಲಿ ಕಚೇರಿ ಸೇವೆಯನ್ನು ಒದಗಿಸಬೇಕು. ‘ಎಂಡೆ ಜಿಲ್ಲ’ ವೆಬ್‍ಸೈಟ್ ನಲ್ಲಿ ಅಧಿಕಾರಿಗಳ ದೂರವಾಣಿ ಸಂಖ್ಯೆ ಲಭ್ಯವಿದೆ. ಜನರು ಈ ಸೇವೆಯನ್ನು ಬಳಸಬಹುದು. ವೆಳ್ಳರಿಕುಂಡು ನಿರ್ಮಲಗಿರಿ ಎಲ್.ಪಿ. ಶಾಲೆಯ ಕೊಠಡಿಗಳನ್ನು ಗಂಟಲು ದ್ರವ ಸಂಗ್ರಹ ಕೇಂದ್ರವನ್ನಾಗಿ ಪರಿವರ್ತಿಸಲು ಅನುಮತಿ ನೀಡಲಾಗಿದೆ.
ಮೀನುಗಾರಿಕೆಯ ನಿಯಂತ್ರಣ: ಮೀನುಗಾರಿಕೆ ನಿಷೇಧ ಜುಲೈ 17ರವರೆಗೆ ಮುಂದುವರಿಯುತ್ತದೆ. ಸಾಂಪ್ರದಾಯಿಕ ಮೀನುಗಾರಿಕೆಯನ್ನು ನಂತರ ಟೋಕನ್ ವ್ಯವಸ್ಥೆಯ ಮೂಲಕ ನಿರ್ಬಂಧಿಸಿ ಅನುಮತಿ ನೀಡುತ್ತೇವೆ. ಆದರೆ ಮೀನುಗಳನ್ನು ಹರಾಜು ಮಾಡುವಂತಿಲ್ಲ. ಕ್ಷೌರಿಕರ ಅಂಗಡಿಗಳಲ್ಲಿ ಮುಖಕವಚಗಳು, ಕೈಗವಸುಗಳು ಮತ್ತು ಸ್ಯಾನಿಟೈಸರ್ ಗಳು ಕಡ್ಡಾಯವಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕೋವಿಡ್ ನಿಯಂತ್ರಣದ ಭಾಗವಾಗಿ ಪಂಚಾಯತ್ ಮತ್ತು ಪುರಸಭೆ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸುವಾಗ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕರೋನಾ ಕೋರ್ ಸಮಿತಿ ಸಭೆಯ ನಿರ್ಧಾರಗಳನ್ನು ಅನುಸರಿಸಲು ಕಾಳಜಿ ವಹಿಸಬೇಕು, ಅದು ಎಂದಿಗೂ ಜನರ ಜೀವನದ ಮೇಲೆ ಪರಿಣಾಮ ಬೀರಬಾರದು ಎಂದು ಸಭೆ ಸೂಚಿಸಿತು. ಸಭೆಯಲ್ಲಿ ಜಿಲ್ಲೆಯ ವಿಶೇಷ ಉಸ್ತುವಾರಿ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದ ನಿರ್ದೇಶಕಿ ಟಿ.ವಿ.ಅನುಪಮಾ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಸರಗೋಡು ಜಿಲ್ಲಾ ಎಸ್ಪಿ ಶಿಲ್ಪಾ, ಡಿಎಂಒ ಡಾ.ಎ.ವಿ. ರಾಮದಾಸ್, ಸಬ್ ಕಲೆಕ್ಟರ್ ಅರುಣ್ ಕೆ ವಿಜಯನ್, ಎಡಿಎಂ ಎನ್.ದೇವಿದಾಸ್, ಡಿಡಿಇ ಕೆವಿ ಪುಷ್ಪಾ, ಆರ್.ಡಿ.ಒ ಟಿ.ಆರ್. ಅಹ್ಮದ್ ಕಬೀರ್, ಮೀನುಗಾರಿಕೆ ಉಪನಿರ್ದೇಶಕ ಪಿ.ವಿ.ಸತೀಶನ್ ಕೊರೊನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.