ಉಡುಪಿ: ದೇಶದ ಜನರಲ್ಲಿ ಪ್ರತಿರೋಧ ಶಕ್ತಿ ಅಡಗಿ ಹೋಗಿದೆ ಎಂದು ಸಫ್ದರ್ ಹಶ್ಮಿ ನೆನಪಿನ ಹಲ್ಲಾ ಬೋಲ್ ಸಂವಾದದಲ್ಲಿ ರಾಘವೇಂದ್ರ ಬೈಂದೂರು ಕಳವಳ ವ್ಯಕ್ತಪಡಿಸಿದ್ದಾರೆ.
ಬೀದಿ ನಾಟಕಗಳ ಹರಿಕಾರ, ನಟ ನಿರ್ದೇಶಕ ಶೋಷಿತರ ಕಾರ್ಮಿಕರ ಪರವಾದ ಗಟ್ಟಿ ಧನಿಯ ಸಫ್ದರ್ ಹಶ್ಮೀ ನೆನಪಿನಲ್ಲಿ ‘ಹಲ್ಲಾ ಬೋಲ್’ ಸಂವಾದ ಕಾರ್ಯಕ್ರಮ, ಉಡುಪಿಯ ರಥಬೀದಿ ಗೆಳೆಯರು ಸಂಸ್ಥೆ ಆಯೋಜಿಸಿದ ಕಾರ್ಯಕ್ರಮ ನಗರದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ರಾಘವೇಂದ್ರ ಕೆ. ಬೈಂದೂರು ಪಾಲ್ಗೊಂಡು, ದೇಶದಲ್ಲಿ ಪ್ರತಿರೋಧ ಶಕ್ತಿ ಅಡಗಿ ಹೋಗಿದೆ. ಯಾವ ವಿಚಾರದಲ್ಲೂ ಜನ ಪ್ರತಿಭಟಿಸುವ ಗೋಜಿಗೆ ಹೋಗುತ್ತಿಲ್ಲ. ಬೀದಿ ನಾಟಕ ಮೂಲಕ ಆಳುವ ವರ್ಗದ ದಬ್ಬಾಳಿಕೆ ವಿರೋಧಿಸುವ, ಪ್ರಶ್ನಿಸುವ ಗುಣವನ್ನು ಜನ ಬೆಳೆಸಬೇಕಾಗಿದೆ ಎಂದು ಅವರು ಹೇಳಿದರು.
ಭಾರತದ ಚರಿತ್ರೆಯಲ್ಲಿ ಸಕಾಲದಲ್ಲಿ ಸಕಾರಾತ್ಮಕ ಚಿಂತನೆಯನ್ನು ಬೀದಿ ನಾಟಕ ಮೂಲಕ ಜನಮಾನಸದಲ್ಲಿ ಅಚ್ಚು ಒತ್ತುತ್ತಿದ್ದ ಬೀದಿನಾಟಕಕಾರ ಸಫ್ದಾರ್ ಹಾಶ್ಮಿ. ಜನರ ನೋವು ನಲಿವಿನ ಜೊತೆ ಸಾಮಾಜಿಕ ಯಥಾರ್ಥ ಮುಖಕ್ಕೆ ಹೊಡೆದಂತೆ ಹೇಳುವ ಮನೋಭಾವ ಬೆಳೆಸಿದ್ದ ರಂಗ ನಿರ್ದೇಶಕ ಎಂದು ಡಾ. ಮಾಧವಿ ಭಂಡಾರಿ ಹೇಳಿದರು.
ಮೂವತ್ನಾಲ್ಕು ವರ್ಷ ಬದುಕಿದ್ದ ಸಫ್ದರ್ ಹಶ್ಮಿ 24 ಬೀದಿ ನಾಟಕ ನಿರ್ದೇಶಿಸಿ, ನಟಿಸಿ 4,000 ಪ್ರದರ್ಶನ ಮಾಡಿದ್ದಾರೆ. ಆಳುವ ವರ್ಗದ ವಿರುದ್ಧ ನಿರಂತರ ಧ್ವನಿ ಎತ್ತಿದ್ದ ಸಫ್ದರ್ ಗಾಜಿಯಾಬಾದ್ ನಲ್ಲಿ ಹತ್ಯೆಗೀಡಾದರು. ಆತನ ಶವಯಾತ್ರೆಯೇ ಚಾರಿತ್ರಿಕವಾಗಿದೆ. ಆತನ ಶವಯಾತ್ರೆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ ಜನಸಾಗರ ಆತನಿಗಿದ್ದ ಜನಬೆಂಬಲ ಸಾಕ್ಷಿ ಎಂದರು. ಸಫ್ದರ್ ಪತ್ನಿ ಮೌಲಾಯಶ್ರೀ ಗಂಡನ ಕ್ರಾಂತಿಯ ಅಚ್ಚನ್ನು ಒತ್ತಿದ್ದಾಳೆ ಎಂದು ಮಾಧವಿ ಭಂಡಾರಿ ಹೇಳಿದರು.
ಸಂಸ್ಥೆಯ ಅಧ್ಯಕ್ಷ ಹಿರಿಯಡ್ಕ ಮುರಳೀಧರ ಉಪಾಧ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ, ಸಂತೋಷ್ ಬಲ್ಲಾಳ್, ಉದ್ಯಾವರ ನಾಗೇಶ್, ಸಂತೋಷ್ ಶೆಟ್ಟಿ ಹಿರಿಯಡ್ಕ, ಸಂತೋಷ್ ನಾಯಕ್ ಪಟ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.