ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಇತಿಹಾಸದಲ್ಲಿಯೇ ಈ ರೀತಿ ಯಾರೂ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ವಿಚಾರದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕೆಲವರ ಬಣ್ಣ ಈಗ ಬಯಲಾಗ್ತಿದೆ. ಹಿಂದಿನ ಸರ್ಕಾರ ಕಣ್ಮುಚ್ಚಿ ಕುಳಿತಿತ್ತು. ದೇಶದ ಇತಿಹಾಸದಲ್ಲಿ ಯಾರೂ ಕೂಡ ಈ ರೀತಿ ಕ್ರಮ ಕೈಗೊಂಡಿರಲಿಲ್ಲ. ಸಿಸಿಬಿ ತನಿಖೆ ಮಾಡ್ತಿದೆ. ಎಲ್ಲರ ಬಣ್ಣ ಬಯಲಾಗುತ್ತೆ ಎಂದು ತಿಳಿಸಿದರು.
ಡ್ರಗ್ಸ್ ಕೇಸ್ ಸಂಬಂಧ ತನಿಖೆ ಆಗ್ತಿದೆ. ಇದರಲ್ಲಿ ಯಾರನ್ನೂ ಸೇವ್ ಮಾಡುವ ಪ್ರಶ್ನೆಯೇ ಇಲ್ಲ. ದೇಶದ ಇತಿಹಾಸದಲ್ಲಿ ಕಳೆದ 10 ವರ್ಷಗಳಿಂದ ಈ ರೀತಿಯ ಘಟನೆ ನಡೆಯುತ್ತಿದ್ದರೂ ಹಿಂದಿನ ಸರ್ಕಾರಗಳು ಏನು ಕ್ರಮಗಳನ್ನು ಕೈಗೊಳ್ಳದೇ ಕೈಕಟ್ಟಿ ಕುಳಿತಿದ್ದವು. ಆದರೆ ಈ ಸಾರಿ ನಾವು ಆ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿಸ್ತಿದ್ದೇವೆ ಎಂದರು.
ಇದೇ ವೇಳೆ ಕೊರೊನಾ ವೈರಸ್ ಸಂಬಂಧ ಮಾತನಾಡಿದ ಸಿಎಂ, ಕೋವಿಡ್ ನಿಯಂತ್ರಣದ ಬಗ್ಗೆ ಡಿಸಿಗಳು, ಸಿಇಓಗಳ ಜತೆ ಸಭೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಟೆಸ್ಟ್ ಗೆ ಸೂಚಿಸಿದ್ದೇವೆ. ಮನೆ ಮನೆ ಸರ್ವೆ ಮುಂದುವರಿಸುವಂತೆ ಸೂಚನೆ ನೀಡಲಾಗಿದೆ. ಯಾವ ಜಿಲ್ಲೆಯಲ್ಲೂ ವೆಂಟಿಲೇಟರ್, ಅಕ್ಸಿಜೆನ್ ಬೆಡ್ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.
ಕೋವಿಡ್ ಮತ್ತು ಮಳೆ ಹಾನಿ ಸಂಬಂಧ ಡಿಸಿಗಳ ಜೊತೆ ವಿಸ್ತೃತವಾಗಿ ಚರ್ಚೆ ನಡೆಸಲಾಯ್ತು. ಎಲ್ಲಾ ಡಿಸಿಗಳ ಅಕೌಂಟ್ ನಲ್ಲಿ 25 ರಿಂದ 30 ಕೋಟಿ ಹಣವಿದೆ. ಯಾವುದೇ ಹಣದ ಕೊರೆತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆ ಸಂಬಂಧ ಪ್ರತಿಕ್ರಿಯಿಸಿ, ನಾಲ್ಕೈದು ದಿನದಲ್ಲಿ ದೆಹಲಿಗೆ ತೆರಳುತ್ತೇನೆ. ಹೈಕಮಾಂಡ್ ಟೈಂ ಕೊಟ್ಟ ತಕ್ಷಣ ಹೊರಡುತ್ತೇನೆ. ಸಂಪುಟ ವಿಸ್ತರಣೆ ವಿಚಾರ, ನೆರೆ ಪರಿಹಾರ ವಿಚಾರವಾಗಿ ಚರ್ಚೆ ನಡೆಸುತ್ತೇನೆ ಎಂದರು.