ನೆಲಮಂಗಲ: ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇದೀಗ ಶುದ್ಧ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ.
ಕೊರೋನಾ ಸೋಂಕಿತರಿಗೆ ನೀರು ಕೊಡುವಲ್ಲಿ ಬಿಬಿಎಂಪಿ ವಿಫಲವಾಯಿತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಕಂಟೇನರ್ ಕ್ಯಾನ್ ಗಳಿಂದ ಸೋಂಕಿತರಿಗೆ ನೀರಿನ ವ್ಯವಸ್ಥೆ ಮಾಡಿದ್ದು, ಅವ್ಯವಸ್ಥೆಯ ಬಗ್ಗೆ ಕೊರೊನಾ ಸೋಂಕಿತರು ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದಾರೆ. ಶುದ್ಧ ಕುಡಿಯುವ ನೀರಿನ ಬದಲು ಟ್ಯಾಂಕರ್ ನೀರು ಸರಬರಾಜು ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಮೂಲಕ ದೇಶದ ಅತಿದೊಡ್ಡ ಕೋವಿಡ್ ಕೇರ್ ಕೇಂದ್ರದಲ್ಲಿ ನೀರಿನ ಅವ್ಯವಸ್ಥೆಯ ಉಂಟಾಗಿದೆ ಎನ್ನಲಾಗಿದೆ.
ಕೇರ್ ಸೆಂಟರ್ ನಲ್ಲಿ ಕುಡಿಯುವ ನೀರಿನ ಅಭಾವ ಇರುವ ಬಗ್ಗೆ ಸೋಂಕಿತರೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಶೌಚಾಲಯದಲ್ಲೂ ನೀರಿನ ಅಭಾವ ಶುರುವಾಗಿದ್ದು, ಸೋಂಕಿತರು ಪರದಾಟ ನಡೆಸುತ್ತಿದ್ದಾರೆ. ಬಿಸಿ ನೀರಿನ ವ್ಯವಸ್ಥೆಯಲ್ಲಿ ಸಹ ಸಾಕಷ್ಟು ಸಮಸ್ಯೆಯಿದ್ದು, ಕೊರೊನಾ ಸೋಂಕಿತರು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಕೂಡಲೇ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.