ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಲು ತಬ್ಲಿಘಿಗಳೂ ಕಾರಣ. ಒಂದೇ ಸ್ಥಳದಲ್ಲಿ ಹೆಚ್ಚು ಜನ ಸೇರಿದ್ದರಿಂದ ಹಾಗೂ ಸಮಾರಂಭದಲ್ಲಿ ವಿವಿಧ ರಾಜ್ಯಗಳ ಜನರು ಭಾಗವಹಿಸಿದ್ದರಿಂದ ವ್ಯಾಪಕವಾಗಿ ಹಬ್ಬಿತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಶಿವ ಸೇನೆಯ ಸಂಸದ ಅನಿಲ್ ದೇಸಾಯಿ ಅವರು ದೆಹಲಿ ತಬ್ಲಿಘಿ ಜಮಾತ್ ಸಭೆಯಿಂದ ದೇಶದಲ್ಲಿ ಎಷ್ಟು ಜನರಿಗೆ ಕೊರೊನಾ ಹರಡಿದೆ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಗೃಹ ಸಚಿವ ಜಿ.ಕೃಷ್ಣಾ ರೆಡ್ಡಿ ಅವರು ರಾಜ್ಯ ಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಇದರಲ್ಲಿ ಕೊರೊನಾ ವ್ಯಾಪಕವಾಗಿ ಹರಡುವಿಕೆಗೆ ಕಾರಣ ತಿಳಿಸಿದ್ದು, ಮಾರ್ಚ್‍ನಲ್ಲಿ ದೆಹಲಿಯಲ್ಲಿ ನಡೆದ ಮುಸ್ಲಿಂ ಸಮುದಾಯದ ತಬ್ಲಿಘಿ ಜಮಾತ್ ವೇಳೆ ಹೆಚ್ಚು ಜನರು ಒಂದೇ ಕಡೆ ಸೇರಿರುವುದೂ ಕೊರೊನಾ ವ್ಯಾಪಕವಾಗಿ ಹರಡಲು ಕಾರಣ. ಕೊರೊನಾ ಪ್ರಕರಣಗಳು ಕಾಣಿಸಿಕೊಂಡ ಸಂದರ್ಭದಲ್ಲಿ ವಿವಿಧ ಪ್ರಾಧಿಕಾರಗಳು ಹೆಚ್ಚು ಜನ ಸೇರದಂತೆ, ಯಾವುದೇ ಕಾರ್ಯಕ್ರಮ ನಡೆಸದಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ದೆಹಲಿಯಲ್ಲಿ ಯಾರಿಗೂ ತಿಳಿಯದಂತೆ ಮುಸ್ಲಿಂ ಸಮುದಾಯದವರು ಕಾರ್ಯಕ್ರಮ ನಡೆಸಿದ್ದರು ಎಂದು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಈ ಕುರಿತು ವರದಿ ಮಾಡಿದ್ದು, ಕೊರೊನಾ ವೈರಸ್ ಹರಡುವ ಹಿನ್ನೆಲೆ ವಿವಿಧ ಪ್ರಾಧಿಕಾರಗಳು ಆದೇಶ, ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಇದರ ಹೊರತಾಗಿಯೂ ಯಾರಿಗೂ ತಿಳಿಯದಂತೆ ಗುಪ್ತವಾಗಿ ಬೃಹತ್ ಸಭೆಯನ್ನು ನಡೆಸಲಾಯಿತು. ಈ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಸೇರಿದಂತೆ ಕೊರೊನಾದ ಯಾವುದೇ ನಿಯಮ ಪಾಲಿಸಿರಲಿಲ್ಲ. ಹೀಗಾಗಿ ಕೊರೊನಾ ವ್ಯಾಪಕವಾಗಿ ಹಬ್ಬಲು ಇದೂ ಒಂದು ಕಾರಣ ಎಂದು ಸಚಿವರು ತಿಳಿಸಿದರು.
ಮಾರ್ಚ್‍ನಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮಸೀದಿಯಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದ ಧಾರ್ಮಿಕ ಕೂಟದಲ್ಲಿ ಭಾಗವಹಿಸಿದ್ದ ವಿದೇಶಿ ಹಾಗೂ ಸ್ಥಳೀಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಈ ಧಾರ್ಮಿಕ ಕೂಟದಲ್ಲಿ ಭಾಗವಹಿಸಿದ್ದ ನೂರಾರು ಜನರ ಸಂಪರ್ಕದ ಹಿನ್ನೆಲೆ ವಿವಿಧ ರಾಜ್ಯಗಳಲ್ಲಿ ಕೊರೊನಾ ವ್ಯಾಪಿಸಿತು ಎಂದು ವಿವರಿಸಿದರು.
ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಕೊರೊನಾ ಹೇಗೆ ವ್ಯಾಪಿಸಿತು ಎಂಬುದನ್ನು ವಿವರಿಸಿ ಎಂದು ಅನಿಲ್ ದೇಸಾಯಿ ಕೇಳಿದ್ದರು. ಹೀಗಾಗಿ ಕೇಂದ್ರ ಸಚಿವ ಜಿ.ಕೃಷ್ಣಾ ರೆಡ್ಡಿ ಲಿಖಿತ ಉತ್ತರದ ಮೂಲಕ ಮಾಹಿತಿ ನೀಡಿದ್ದಾರೆ.
ಬಳಿಕ ತಬ್ಲಿಘಿ ಜಮಾತ್‍ನಲ್ಲಿ ಎಷ್ಟು ಜನ ಭಾಗವಹಿಸಿದ್ದರು, ಎಷ್ಟು ಜನರನ್ನು ಬಂಧಿಸಲಾಗಿದೆ ಎಂದು ಸಂಸದ ಅನಿಲ್ ದೇಸಾಯಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವಾಲಯ, ತಬ್ಲಿಘಿ ಜಮಾತ್‍ನ ಸುಮಾರು 2,361 ಜನರನ್ನು ಮಾರ್ಚ್ 29ರಂದು ದೆಹಲಿ ಪೊಲೀಸರು ಸ್ಥಳಾಂತರಿಸಿದ್ದಾರೆ. ಜಮಾತ್‍ನ 233 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಜಮಾತ್ ಮುಖ್ಯಸ್ಥ ಮೌಲಾನಾ ಮೊಹದ್ ಸಾದ್‍ನನ್ನು ವಿಚಾರಣೆ ನಡೆಸುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ರೆಡ್ಡಿ ವಿವರಿಸಿದ್ದಾರೆ.
ದೆಹಲಿ ಪೊಲೀಸರು ಜಮಾತ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ 36 ದೇಶಗಳ 956 ವಿದೇಶಿಗರ ವಿರುದ್ಧ 59 ಚಾರ್ಜ್‍ಶೀಟ್ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಅವರ ವಿಸಾ ರದ್ದುಪಡಿಸಿದೆ. ಪ್ರವಾಸ ವೀಸಾದಲ್ಲಿ ಬಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಪರಾಧ. ಈ ಹಿನ್ನೆಲೆಯಲ್ಲಿ ಪ್ರವಾಸಿ ವೀಸಾ ದುರುಪಯೋಗ ಮಾಡಿದವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಈ ವಿದೇಶಿಗರು ಪ್ರವಾಸಿ ವಿಸಾ ಪಡೆದು ಭಾರತಕ್ಕೆ ಬಂದಿದ್ದು, ಧಾರ್ಮಿಕ ಕೂಟಗಳಲ್ಲಿ ಭಾಗಿಯಾಗಿದ್ದರು ಎಂದು ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.