ಶಿವಮೊಗ್ಗ: ಇಡೀ ದೇಶದಲ್ಲಿಯೇ ರಾಜ್ಯ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆರೋಪಿಸಿದ್ದಾರೆ.
ನಗರದಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಬದಲಿಗೆ ಬಿಜೆಪಿ ಪಕ್ಷದ ಹಿರಿಯ ನಾಯಕರೇ ಮಾಡುತ್ತಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಶ್ವನಾಥ್ ಅವರು ಪ್ರತಿನಿತ್ಯ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಆದರೆ ಭ್ರಷ್ಟಾಚಾರ ಆರೋಪ ಮಾಡಿದರೂ ಹೈಕಮಾಂಡ್ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಹೈಕಮಾಂಡ್ ಬೆಂಬಲ ಇಲ್ಲದಿದ್ದರೆ ಅವರು ಈ ರೀತಿ ಮಾತನಾಡುತ್ತಿರಲಿಲ್ಲ ಎಂದರು.
ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಒಳ್ಳೆಯ ಆಡಳಿತ ಕೊಟ್ಟಿದ್ದೆ. ಯಾವುದೇ ಭ್ರಷ್ಟಾಚಾರ ಆರೋಪ ನಮ್ಮ ಮೇಲೆ ಇಲ್ಲ. ಹೀಗಾಗಿಯೇ ಮುಂದಿನ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸ ಇದೆ ಎಂದರು.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನದ ವಿಷಯ ಚರ್ಚೆ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಈ ವಿಷಯ ಅಪ್ರಸ್ತುತ. ಚುನಾವಣೆಗೆ ಇನ್ನು ಒಂದೂವರೆ ವರ್ಷ ಬಾಕಿ ಇದೆ. ಹೀಗಾಗಿ ಈ ವಿಷಯದ ಬಗ್ಗೆ ಯಾರೂ ಚರ್ಚೆ ಮಾಡಬಾರದು. ಜೊತೆಗೆ ಈ ವಿಷಯದ ಬಗ್ಗೆ ಚರ್ಚೆ ಮಾಡಲು ಇದು ಸಮಯವಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜಿವಾಲ ನೀಡಿದ್ದಾರೆ ಎಂದು ಆರ್.ಧ್ರುವನಾರಾಯಣ್ ತಿಳಿಸಿದರು.