ಚಿಕ್ಕಮಗಳೂರು: ದೇವಾಲಯದ ಹುಂಡಿ ಒಡೆಯಲು ಬಂದ ಕಳ್ಳನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಕಲ್ಲುಹೊಳೆ ಗ್ರಾಮದಲ್ಲಿ ನಡೆದಿದೆ.
ಕಲ್ಲುಹೊಳೆ ಗ್ರಾಮದ ಹುಲ್ಲೇ ಕಲ್ಲೇಶ್ವರ ಸ್ವಾಮಿಯ ದೇವಾಲಯದ ಹುಂಡಿ ಒಡೆಯಲು ಕಳ್ಳ ಕಳೆದ ರಾತ್ರಿ ಬಂದಿದ್ದ. ಮಚ್ಚು ಹಾಗೂ ಸುತ್ತಿಗೆಯಲ್ಲಿ ಹುಡಿಯನ್ನ ಒಡೆಯುವ ವೇಳೆ ಶಬ್ಧ ಕೇಳಿ ಗ್ರಾಮಸ್ಥರು ಇಡೀ ದೇವಾಲಯವನ್ನ ಸುತ್ತುವರಿದಿದ್ದರು. ಯಾಕಂದರೆ ದೇವಾಲಯದಲ್ಲಿ ಹಿಂದೊಮ್ಮೆಯೂ ಕಳ್ಳತನವಾಗಿತ್ತು. ಹಾಗಾಗಿ ಊರಿನ ಜನ ಕೂಡ ಅಲರ್ಟ್ ಆಗಿದ್ದರು.
ದೇವಾಲಯದಲ್ಲಿ ಹುಂಡಿ ಒಡೆಯುವ ಶಬ್ಧ ಕೇಳಿದ ಕೂಡಲೇ ಗ್ರಾಮಸ್ಥರು ದೇವಾಲಯವನ್ನ ಸುತ್ತುವರಿದು ಕಳ್ಳನನ್ನ ಹಿಡಿದಿದ್ದಾರೆ. ಎರಡನೇ ಬಾರಿ ದೇವಾಲಯದ ಹುಂಡಿ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳ ಸ್ಥಳೀಯರ ಅತಿಥಿಯಾಗಿ ಗೂಸಾ ತಿಂದಿದ್ದಾನೆ. ಹುಂಡಿ ಕಳ್ಳನನ್ನ ಹಿಡಿದ ಸ್ಥಳೀಯರು ಅವನನ್ನ ಊರಿನ ಹೆಬ್ಬಾಗಿಲ ಕಂಬಕ್ಕೆ ಕಟ್ಟಿ ಥಳಿಸಿ, ಕಡೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬರುವವರೆಗೂ ಸ್ಥಳೀಯರು ಹುಂಡಿ ಕಳ್ಳನಿಗೆ ಭರ್ಜರಿ ಗೂಸಾ ಕೊಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನ ವಶಕ್ಕೆ ಪಡೆದಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.