– 20 ಗ್ರಾಂ ತೂಕದ ಚಿನ್ನಕ್ಕಾಗಿ ಹಾಡಹಗಲೇ ಮರ್ಡರ್
ಚಿಕ್ಕಮಗಳೂರು: ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ವೃದ್ಧೆಗೆ ದುಷ್ಕರ್ಮಿಗಳು ಹಿಂಬದಿಯಿಂದ ಬಂದು ದೊಣ್ಣೆಯಿಂದ ಹೊಡೆದಿದ್ದಾರೆ. ಅಲ್ಲದೇ ಆಕೆಯ ಕೊರಳಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.
ನಾಗರತ್ನ (70) ದೇವಸ್ಥಾನದ ಆವರಣದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ನಾಗರತ್ನ ಬಹಳ ವರ್ಷಗಳಿಂದ ಅಜ್ಜಂಪುರದ ಪಟ್ಟಣದಲ್ಲಿದ್ದ ಶಿವಾನಂದಾಶ್ರಮಕ್ಕೆ ಹೋಗಿ ಬರುತ್ತಿದ್ದರು. ಪೂಜೆ ಮಾಡಿ ದೇವಸ್ಥಾನದ ಸುತ್ತಲು ಪ್ರದಕ್ಷಿಣಿ ಹಾಕಿಕೊಂಡು ಬರುತ್ತಿದ್ದರು. ಆದರೆ ಇಂದು ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ವೃದ್ಧೆಯ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ. ನಂತರ ಆಕೆಯ ಕೊರಳಲಿದ್ದ 20 ಗ್ರಾಮ ಚಿನ್ನದ ಸರವನ್ನ ಕದ್ದು ಪರಾರಿಯಾಗಿದ್ದಾರೆ.
ಬಲವಾದ ಹೊಡೆತದಿಂದ ವೃದ್ಧೆ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಹಾಡಹಗಲೇ ದೇವಸ್ಥಾನದಲ್ಲಿ ನಡೆದ ಈ ಘಟನೆ ಕಂಡು ತಾಲೂಕಿನ ಜನ ಆತಂಕಕ್ಕೀಡಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯವನ್ನ ಗೊತ್ತಿರುವವರೇ ಮಾಡಿರೋದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಅಜ್ಜಂಪುರ ಪೊಲೀಸರು ಕೊಲೆಗಾರರಿಗಾಗಿ ಬಲೆ ಬೀಸಿದ್ದಾರೆ.